ADVERTISEMENT

‘ಕಾವೇರಿ ನೀರು ಬೆಂಗಳೂರಿಗೆ ಪ್ರತ್ಯೇಕವಾಗಿ ಹಂಚಿಕೆಯಾಗಲಿ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 20:30 IST
Last Updated 20 ಜುಲೈ 2017, 20:30 IST

ನವದೆಹಲಿ: ಬೆಂಗಳೂರಿನ ಶೇ 75ರಷ್ಟು ಪ್ರದೇಶವನ್ನು ಕಾವೇರಿ ಕಣಿವೆ ವ್ಯಾಪ್ತಿಯಿಂದ ಹೊರಗಿರಿಸಿ, ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ಅಲ್ಲಿ ವಾಸಿಸುವ ಜನರಿಗೆ ಕುಡಿಯುವ ನೀರಿನ ಹಂಚಿಕೆಯಾಗದೇ ಉಳಿದಿದೆ ಎಂದು ಕರ್ನಾಟಕವು ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಸಿವಿಲ್‌ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯಪೀಠದೆದುರು ಗುರುವಾರ ವಾದ ಮಂಡಿಸಿದ ರಾಜ್ಯ ಪರ ವಕೀಲ ಶ್ಯಾಂ ದಿವಾನ್‌, ಬೆಂಗಳೂರಿನಲ್ಲಿ 1.10 ಕೋಟಿ ಜನ ವಾಸಿಸುತ್ತಿದ್ದಾರೆ. ಅಲ್ಲಿನ ಹೈಕೋರ್ಟ್‌ ಕಟ್ಟಡವನ್ನು ಕಾವೇರಿ ಕಣಿವೆ ವ್ಯಾಪ್ತಿಗೆ ಸೇರಿಸಿ, ಎದುರಿಗೇ ಇರುವ ವಿಧಾನಸೌಧವನ್ನು ಆ ವ್ಯಾಪ್ತಿಯಿಂದ ಹೊರಗಿರಿಸಿರುವುದು ಅವೈಜ್ಞಾನಿಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ, ಭಾರತ– ಪಾಕಿಸ್ತಾನದ ನಡುವಿನ ಗಡಿಯನ್ನು ವಾಘಾದಲ್ಲಿರುವ ಒಂದು ಗೋಡೆ ನಿರ್ಧರಿಸುತ್ತದೆ. ಆ ಗೋಡೆಯನ್ನು ತೆಗೆದು ಪಾಕಿಸ್ತಾನವನ್ನು ಭಾರತದ ಭಾಗ ಎಂದು ಹೇಳಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ADVERTISEMENT

‘ಕರ್ನಾಟಕ ಈಗ ತನ್ನ ವಾದವನ್ನು ಮಂಡಿಸುತ್ತಿದ್ದು, ನಿಮ್ಮ ಸರದಿ ಬಂದಾಗ ನಿಮ್ಮ ವಿಚಾರಗಳನ್ನು ಮಂಡಿಸಿ’ ಎಂದು ನ್ಯಾಯಪೀಠ ತಾಕೀತು ಮಾಡಿತು.
ಬೆಂಗಳೂರಿನ ಜನರ ಅಗತ್ಯಗಳಿಗಾಗಿ ಕಾವೇರಿ ನೀರನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಬೇಕಿದೆ ಎಂದು ಹೇಳಿದ ಅವರು, ಲಭ್ಯ ಅಂತರ್ಜಲದ ಪ್ರಮಾಣ ಕುರಿತು ತಮಿಳುನಾಡು ತಪ್ಪು ಮಾಹಿತಿ ನೀಡಿದೆಯಲ್ಲದೆ, ಅಂತರ್ಜಲವನ್ನು ಸಮರ್ಪಕವಾಗಿ ಬಳಸದೆ ಪೋಲು ಮಾಡುತ್ತಿದೆ ಎಂದು ದಿವಾನ್‌ ಹೇಳಿದರು.

ಕರ್ನಾಟಕದ ವಾದ ಕೊನೆಗೊಂಡಿದ್ದು, ಜುಲೈ 25ರಂದು ಮುಂದುವರಿಯಲಿರುವ ವಿಚಾರಣೆ ವೇಳೆ ತಮಿಳುನಾಡು ತನ್ನ ವಾದ ಮಂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.