ADVERTISEMENT

ಕಾವೇರಿ ನ್ಯಾಯಮಂಡಳಿಗೆ ನೂತನ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:35 IST
Last Updated 21 ಫೆಬ್ರುವರಿ 2017, 19:35 IST
ಕಾವೇರಿ ನ್ಯಾಯಮಂಡಳಿಗೆ ನೂತನ ಅಧ್ಯಕ್ಷ
ಕಾವೇರಿ ನ್ಯಾಯಮಂಡಳಿಗೆ ನೂತನ ಅಧ್ಯಕ್ಷ   

ನವದೆಹಲಿ: ವರ್ಷದ ಹಿಂದೆ ತೆರವಾಗಿದ್ದ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿ ಅಭಯ ಮನೋಹರ ಸಪ್ರೆ ಅವರನ್ನು ನೇಮಕ ಮಾಡಲಾಗಿದೆ.

ಭಾರತೀಯ ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ಕಾರಣ ನ್ಯಾಯಮೂರ್ತಿ ಬಲಬೀರ್ ಸಿಂಗ್ ಚೌಹಾಣ್ ಕಾವೇರಿ ನ್ಯಾಯಮಂಡಳಿಯ ಅಧ್ಯಕ್ಷ ಹುದ್ದೆಗೆ 2016ರ ಮಾರ್ಚ್ ತಿಂಗಳಿನಲ್ಲಿ ರಾಜೀನಾಮೆ ಸಲ್ಲಿಸಿದ್ದರು.

ನ್ಯಾಯಮೂರ್ತಿ ಸಪ್ರೆ 2019ರ ಆಗಸ್ಟ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ನಿಂದ ನಿವೃತ್ತರಾಗಲಿದ್ದಾರೆ. ಅಲ್ಲಿಯವರೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಯ ಜೊತೆಗೆ ಮತ್ತು ನ್ಯಾಯಮಂಡಳಿಯ ಅಧ್ಯಕ್ಷತೆಯನ್ನೂ ಅವರು ನಿರ್ವಹಿಸಲಿದ್ದಾರೆ.

ADVERTISEMENT

ಸಾಮಾನ್ಯವಾಗಿ ನಿವೃತ್ತಿಯ ಅಂಚಿನಲ್ಲಿರುವ ನ್ಯಾಯಮೂರ್ತಿಯನ್ನು ನ್ಯಾಯಮಂಡಳಿಗಳ ಅಧ್ಯಕ್ಷ ಇಲ್ಲವೇ ಸದಸ್ಯರ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಈ ಬಾರಿ ಈ ಸಂಪ್ರದಾಯವನ್ನು ಪಾಲಿಸಲಾಗಿಲ್ಲ.

ಎಲ್ಲ ಅಂತಾರಾಜ್ಯ ಜಲವಿವಾದಗಳಿಗೂ ಒಂದೇ ನ್ಯಾಯಮಂಡಳಿಯನ್ನು ರಚಿಸುವುದಾಗಿ ನರೇಂದ್ರ ಮೋದಿ ಸರ್ಕಾರ ಇತ್ತೀಚೆಗಷ್ಟೇ ಘೋಷಿಸಿತ್ತು. ಸಂಬಂಧಪಟ್ಟ ಕಾಯಿದೆಗೆ ಸಂಸತ್ ನಲ್ಲಿ ಸದ್ಯದಲ್ಲೇ ತಿದ್ದುಪಡಿ ಮಂಡಿಸುವುದಾಗಿಯೂ ಪ್ರಕಟಿಸಿತ್ತು.

ವಿ.ಪಿ.ಸಿಂಗ್ ಅವರ ರಾಷ್ಟ್ರೀಯ ರಂಗ ಸರ್ಕಾರ 1990ರಲ್ಲಿ ರಚಿಸಿದ್ದ ಕಾವೇರಿ ನ್ಯಾಯಮಂಡಳಿಗೆ ನ್ಯಾಯಮೂರ್ತಿ ಸಪ್ರೆ ನಾಲ್ಕನೆಯ ಅಧ್ಯಕ್ಷರು. ಆರಂಭಿಕ ಅಧ್ಯಕ್ಷರಾಗಿ ನೇಮಕ ಹೊಂದಿದ್ದ ನ್ಯಾಯಮೂರ್ತಿ ಚಿತ್ತತೋಷ್ ಮುಖರ್ಜಿ ಪಕ್ಷಪಾತದ ಆಪಾದನೆಗಳನ್ನು ಎದುರಿಸಿ 1991ರ ಜೂನ್ 25ರ ಕಾವೇರಿ ಮಧ್ಯಂತರ ಆದೇಶ ಹೊರಬೀಳುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಕ್ಕೆ ಬಂದವರು ನ್ಯಾಯಮೂರ್ತಿ ಎನ್.ಪಿ.ಸಿಂಗ್. 2007ರ ಫೆಬ್ರವರಿಯಲ್ಲಿ ನ್ಯಾಯಮಂಡಳಿ ತನ್ನ ಐತೀರ್ಪು ಪ್ರಕಟಿಸಿತ್ತು. ಆನಾರೋಗ್ಯ-ವೃದ್ಧಾಪ್ಯದ ಕಾರಣ ನೀಡಿ ಎನ್.ಪಿ.ಸಿಂಗ್ 2012ರ ಏಪ್ರಿಲ್ ಹನ್ನೊಂದರಂದು ರಾಜೀನಾಮೆ ಸಲ್ಲಿಸಿದ್ದರು. 2014ರ ಜನವರಿಯಲ್ಲಿ ನ್ಯಾಯಮೂರ್ತಿ ಚೌಹಾಣ್ ಅವರನ್ನು ತೆರವಾದ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು.

1956ರ ಅಂತರರಾಜ್ಯ ಜಲವಿವಾದ ಕಾಯಿದೆ ಪ್ರಕಾರ ಸುಪ್ರೀಮ್ ಕೋರ್ಟಿನ ಹಾಲಿ ನ್ಯಾಯಮೂರ್ತಿ ಇಲ್ಲವೇ ಯಾವುದೇ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಾತ್ರವೇ ನ್ಯಾಯಮಂಡಳಿ ಅಧ್ಯಕ್ಷ ಹುದ್ದೆಗೆ ಅರ್ಹರು. ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಈ ಹುದ್ದೆಗೆ ಅರ್ಹ ನ್ಯಾಯಮೂರ್ತಿಯ ಹೆಸರನ್ನು ನಾಮಕರಣ ಮಾಡುತ್ತಾರೆ. ಹೀಗೆ ನಾಮಕರಣ ಮಾಡಿದ ನ್ಯಾಯಮೂರ್ತಿಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತದೆ.

ಸಿಂಗ್ ಅಧ್ಯಕ್ಷತೆಯ ನ್ಯಾಯಮಂಡಳಿ ತನ್ನ ಐತೀರ್ಪು ನೀಡಿದ್ದು 2007ರ ಫೆಬ್ರವರಿ ಐದರಂದು. ಈ ಐತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಮತ್ತು ಕೇರಳ ಸುಪ್ರೀಂ ಕೋಟ್೯ನಲ್ಲಿ 2007ರ ಮೇ ತಿಂಗಳಲ್ಲಿ ಸಲ್ಲಿಸಿದ್ದ ಅಜಿ೯ಗಳ ವಿಚಾರಣೆ ಇತ್ತೀಚೆಗೆ ಆರಂಭವಾಗಿದೆ. ಈ ಅಜಿ೯ಗಳ ಜೊತೆಯಲ್ಲಿಯೇ ಐತೀಪಿ೯ನ ಕುರಿತು ಸ್ಪಷ್ಟೀಕರಣಗಳನ್ನು ಕೋರಿ ಮೂರೂ ರಾಜ್ಯಗಳು ನ್ಯಾಯಮಂಡಳಿಗೂ ಅಜಿ೯ ಸಲ್ಲಿಸಿದ್ದವು.
ಸುಪ್ರೀಂ ಕೋಟ್೯ನಲ್ಲಿ ಸಲ್ಲಿಸಲಾಗಿರುವ ಅಜಿ೯ಗಳ ವಿಲೇವಾರಿ ಆಗುವ ತನಕ ತಾನು ಸ್ಪಷ್ಟೀಕರಣ ಕೋರಿಕೆ ಅಜಿ೯ಗಳನ್ನು ವಿಚಾರಣೆಗೆ ಎತ್ತಿಕೊಳ್ಳುವುದಿಲ್ಲ ಎಂಬ ನಿಲುವನ್ನು ನ್ಯಾಯಾಧಿಕರಣ ತಳೆದಿತ್ತು.

2007ರಲ್ಲಿ ತನ್ನ ಅಂತಿಮ ತೀರ್ಪು ನೀಡಿದ ನಂತರ ಕಾವೇರಿ ನ್ಯಾಯಮಂಡಳಿ ಕೆಲಸವಿಲ್ಲದೆ ಕುಳಿತಿದೆ. ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರು ಮತ್ತು ಉಳಿದ ಸಿಬ್ಬಂದಿಯ ಸಂಬಳ ಸಾರಿಗೆ, ವಾಹನ-ಇಂಧನ ವೆಚ್ಚ ಸೇರಿದಂತೆ ನ್ಯಾಯಮಂಡಳಿಗೆ ವರ್ಷಕ್ಕೆ ತಗಲುವ ವೆಚ್ಚ 2.8 ಕೋಟಿ ರೂಪಾಯಿ. ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ವಾರ್ಷಿಕ ವೆಚ್ಚ 2.6 ಕೋಟಿ ರುಪಾಯಿ. ಕಾಯಿದೆಯ ಪ್ರಕಾರ ನ್ಯಾಯಮಂಡಳಿಯ ವೆಚ್ಚವನ್ನು ಅಂತಿಮವಾಗಿ ವಿವಾದದ ವ್ಯಾಪ್ತಿಯ ರಾಜ್ಯ ಸರ್ಕಾರಗಳು ಭರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.