ADVERTISEMENT

ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆ; ಅರುಣ್ ಜೇಟ್ಲಿ ಹೇಳಿದ 'ಮಹಾ' ಸುಳ್ಳು !

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 16:10 IST
Last Updated 8 ನವೆಂಬರ್ 2017, 16:10 IST
ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆ; ಅರುಣ್ ಜೇಟ್ಲಿ ಹೇಳಿದ 'ಮಹಾ' ಸುಳ್ಳು !
ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆ; ಅರುಣ್ ಜೇಟ್ಲಿ ಹೇಳಿದ 'ಮಹಾ' ಸುಳ್ಳು !   

ನವದೆಹಲಿ: 2016 ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಆರ್ಥಿಕ ವ್ಯವಸ್ಥೆ ಬಲಗೊಂಡಿತು.  ಪ್ರಾಮಾಣಿಕತೆಯ ವ್ಯವಹಾರ ಇಲ್ಲಿ ನಡೆಯುತ್ತಿದೆ, ದೇಶದ ಜನರು ನಗದು ರಹಿತ ವಹಿವಾಟಿಗೆ ಒಗ್ಗಿಕೊಂಡಿದ್ದಾರೆ -ನೋಟು ರದ್ದು ಮಾಡಿರುವ ಕೇಂದ್ರದ ನಿರ್ಧಾರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಬಣ್ಣಿಸಿದ್ದು ಹೀಗೆ.  ನೋಟು ರದ್ದತಿ ನಿರ್ಧಾರವನ್ನು ಸಮರ್ಥಿಸಿಕೊಂಡ ವಿತ್ತ ಸಚಿವರು ಸರಣಿ ಟ್ವೀಟ್‌‍ಗಳ ಮೂಲಕವೂ ಫೇಸ್‍ಬುಕ್ ಪೋಸ್ಟ್ ಗಳ ಮೂಲಕವೂ ನೋಟು ರದ್ದತಿ ಹೀಗೆ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿದೆ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ನಕಲಿ ನೋಟು, ಕಪ್ಪು ಹಣ ವಶಪಡಿಸಿದ ಲೆಕ್ಕವನ್ನೂ ಜೇಟ್ಲಿ ಮುಂದಿಟ್ಟಿದ್ದಾರೆ.

ನೋಟು ರದ್ದತಿಯಿಂದಾಗಿ ಕಾಶ್ಮೀರದಲ್ಲಿ ಸೇನಾ ಪಡೆ ಮೇಲೆ ಕಲ್ಲು ತೂರಾಟ ಕಡಿಮೆ ಆಗಿದೆ ಎಂದು ಅರುಣ್ ಜೇಟ್ಲಿ ಮಂಗಳವಾರ ಹೇಳಿದ್ದರು.ಆದರೆ ಈ ಬಗ್ಗೆ ಸಚಿವರು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಸೌತ್ ಏಷ್ಯಾ ಟೆರರಿಸಂ ಪೋರ್ಟಲ್ (ಎಲ್ಎಟಿಪಿ) ಅಂಕಿ ಅಂಶಗಳನ್ನು ತಮ್ಮ  ಬ್ಲಾಗ್‍ನಲ್ಲಿ ಉಲ್ಲೇಖಿಸಿದ್ದ  ಜೇಟ್ಲಿ, ನೋಟು ರದ್ದತಿ ನಂತರ ಭಯೋತ್ಪಾದನಾ ಕೃತ್ಯಗಳಿಂದ ಸಾವಿಗೀಡಾದವರ ಸಂಖ್ಯೆ ಏರಿಕೆಯಾಗಿದೆ. 2016ರಲ್ಲಿ 267 ಮಂದಿ ಸಾವನ್ನಪ್ಪಿದರೆ 2017  ಅಕ್ಟೋಬರ್ 31ರ ವರೆಗೆ ಸಾವಿಗೀಡಾದವರ ಸಂಖ್ಯೆ 298 ಆಗಿದೆ. 2016ರಲ್ಲಿ 16 ಕಾಶ್ಮೀರಿ ನಿವಾಸಿಗಳು, 88 ಯೋಧರು, 165 ಉಗ್ರರು ಬಲಿಯಾಗಿದ್ದಾರೆ.  ಅದೇ ವೇಳೆ  2017ರಲ್ಲಿ  53 ಕಾಶ್ಮೀರಿಗಳು, 67 ಯೋಧರು ಮತ್ತು 178 ಉಗ್ರರು ಬಲಿಯಾಗಿದ್ದಾರೆ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಜೇಟ್ಲಿ ಮಾತುಗಳನ್ನು ಸಂಪೂರ್ಣ ಸತ್ಯವಲ್ಲ.

ಯೋಧರ ಜೀವಕ್ಕೆ ಬೆಲೆ ಇಲ್ಲವೇ?
2016 ನವೆಂಬರ್ 8ರಂದು ನೋಟು ರದ್ದು ಮಾಡಿದ ನಂತರ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆ ಮೇಲೆ ಕಲ್ಲು ತೂರಾಟ ಪ್ರಕರಣಗಳು ಕಡಿಮೆ ಆಯಿತು ಎಂದಿದ್ದಾರೆ ಜೇಟ್ಲಿ. ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣ ಕಡಿಮೆಯಾಗಲು ನೋಟು ರದ್ದತಿಯೂ ಕಾರಣ ಎಂದು ಈ ಹಿಂದೆ ಗೃಹ ಸಚಿವ ರಾಜನಾಥ್ ಸಿಂಗ್ ಕೂಡಾ ಹೇಳಿದ್ದರು. ಆದರೆ ಇದನ್ನು ನಂಬಲು ಯಾವುದೇ ಸಾಕ್ಷ್ಯಗಳು ಇವರ ಬಳಿ ಇಲ್ಲ.

ADVERTISEMENT

2017ರಲ್ಲಿ ಏಪ್ರಿಲ್ ತಿಂಗಳಲ್ಲಿ ಪ್ರತಿಭಟನಾಕಾರರ ಕಲ್ಲು ಏಟನ್ನು ತಪ್ಪಿಸಲು ಫರೂಖ್ ಅಹ್ಮದ್ ಧರ್ ಎಂಬ ಯುವಕನ್ನು ಭಾರತೀಯ ಸೇನಾಪಡೆ ಮಾನವ ಗುರಾಣಿಯನ್ನಾಗಿ ಬಳಸಿತ್ತು. ಕಾಶ್ಮೀರದಲ್ಲಿ ನಡೆಯುತ್ತಿರುವ ಕಲ್ಲು ತೂರಾಟ ಪ್ರಕರಣಗಳು ಪ್ರಮುಖ ಸುದ್ದಿಯಾಗಿದ್ದು ಆವಾಗಲೇ. 2017 ಮಾರ್ಚ್ ನಲ್ಲಿ ಸೇನಾ ಪಡೆಯ ವಿರುದ್ಧ ಕಲ್ಲು ತೂರಾಟ ಮಾಡಿದವರ ಮೇಲೆ ಸೇನೆ ಗುಂಡು ಹಾರಾಟ ಮಾಡಿದ್ದು ಇದರಲ್ಲಿ ಮೂವರು ಯುವಕರು ಸಾವಿಗೀಡಾಗಿದ್ದರು. ಕಳೆದ ಎರಡು ತಿಂಗಳ ಹಿಂದೆ ಸಪ್ಟೆಂಬರ್‍‍ನಲ್ಲಿಯೂ ಸೇನೆ ವಿರುದ್ಧ ಕಲ್ಲು ತೂರಾಟ ನಡೆದಿತ್ತು.

ನೋಟು ರದ್ದು ಮಾಡಿದ ನಂತರದ ಕೆಲವು ದಿನಗಳಲ್ಲಿ ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾದರೂ, ನಂತರದ ದಿನಗಳಲ್ಲಿ ಯಥಾಸ್ಥಿತಿ ಮುಂದುವರಿದಿತ್ತು ಎಂದು ಮಾಧ್ಯಮಗಳ ವರದಿಗಳು ಹೇಳುತ್ತವೆ. ನೋಟು ರದ್ದತಿಯಿಂದಾಗಿ ಉಗ್ರ ಚಟುವಟಿಗೆಗಳಿಗೆ ಸಿಗುತ್ತಿದ್ದ ಆರ್ಥಿಕ ನೆರವು ಕಡಿಮೆಯಾಯಿತು ಅಂತಾರೆ ಪೊಲೀಸರು. ಉಗ್ರ ಸಂಘಟನೆಯ  ಮುಖ್ಯಸ್ಥರನ್ನೂ ಹತ್ಯೆ ಮಾಡಲಾಯಿತು. ಉಗ್ರ ಸಂಘಟನೆಯ ಕಮಾಂಡರ್‍‍ಗಳು ಉಗ್ರ ಕೃತ್ಯಗಳಿಗಾಗಿ ಆರ್ಥಿಕ ನೆರವು ಪಡೆಯುತ್ತಿದ್ದು ಅವರ ಹತ್ಯೆಯಾದೊಡನೆ ಉಗ್ರ ಕೃತ್ಯಗಳಿಗೂ ಲಗಾಮು ಬಿತ್ತು ಎಂದು ಶೋಪಿಯಾನ್ ಪೊಲೀಸ್ ಸುಪರಿಟೆಂಡೆಂಟ್ ಎ.ಎಸ್ .ದಿನ್‍ಕರ್ ಹೇಳಿರುವುದಾಗಿ ಫಸ್ಟ್ ಪೋಸ್ಟ್ ವರದಿ ಮಾಡಿತ್ತು.

ಏತನ್ಮಧ್ಯೆ, ಬಿಜೆಪಿ ಶಾಸಕರೊಬ್ಬರ ಪ್ರಶ್ನೆಗೆ ಕಾಶ್ಮೀರ ವಿಧಾನಸಭೆಯಲ್ಲಿ ಉತ್ತರಿಸಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ನೋಟು ರದ್ದತಿಯಿಂದಾಗಿ ಕಣಿವೆ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸಂಘರ್ಷಗಳು ಕಡಿಮೆಯಾಗಿದೆ ಎಂಬುದರ ಬಗ್ಗೆ ಯಾವುದೇ ವರದಿ ಇದುವರಗೆ ಸಿಕ್ಕಿಲ್ಲ. ಕಾಶ್ಮೀರದಲ್ಲಿ ಸಂಘರ್ಷವುಂಟು ಮಾಡಲು ನಕಲಿ ನೋಟುಗಳನ್ನು ಬಳಸಲಾಗುತ್ತಿದೆ ಎಂಬುದ ಬಗ್ಗೆ ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ ಎಂದಿದ್ದರು.

ಬಲಿಯಾಗಿದ್ದು ಜನ ಸಾಮಾನ್ಯರು

(ಕೃಪೆ:ಸೌತ್ ಏಷ್ಯಾ ಟೆರರಿಸಂ ಪೋರ್ಟಲ್)

ಕಲ್ಲು ತೂರಾಟ ಪ್ರಕರಣದ ಅಂಕಿ ಅಂಶಗಳನ್ನು ಬದಿಗಿರಿಸಿ ನೋಡಿದರೆ ಇನ್ನುಳಿದ ಪ್ರಕರಣಗಳ ಬಗ್ಗೆ ಎಸ್‍ಎಟಿಪಿಯಲ್ಲಿ ಅಂಕಿ ಅಂಶಗಳು ಲಭ್ಯವಾಗಿವೆ. ಜಮ್ಮು  ಕಾಶ್ಮೀರದಲ್ಲಿ  ಭಯೋತ್ಪಾದನಾ ಕೃತ್ಯಗಳಿಗೆ ಬಲಿಯಾದವರು ಜನ ಸಾಮಾನ್ಯರಾಗಿದ್ದಾರೆ. ಅಂಕಿ ಅಂಶಗಳನ್ನು ಗಮನಿಸಿದರೆ ಉಗ್ರ ಕೃತ್ಯಗಳಲ್ಲಿ ಬಲಿಯಾದವರ ಜನ ಸಾಮಾನ್ಯರ ಸಂಖ್ಯೆ ಏರಿಕೆಯಾಗಿದೆ. ನವೆಂಬರ್ 5ನೇ ತಾರೀಖಿನ ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಸೇನಾಪಡೆಯ ಗುಂಡಿಗೆ ಬಲಿಯಾದ ಉಗ್ರರ ಸಂಖ್ಯೆಯೂ ಹೆಚ್ಚಿದೆ.

(ಕೃಪೆ:ಸೌತ್ ಏಷ್ಯಾ ಟೆರರಿಸಂ ಪೋರ್ಟಲ್)

* 2015ರಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 20 ಜನ ಸಾಮಾನ್ಯರು ಬಲಿಯಾಗಿದ್ದಾರೆ. ಅದೇ ವೇಳೆ  2016ರಲ್ಲಿ  14 ಮಂದಿ ಬಲಿಯಾಗಿದ್ದಾರೆ. ಆದರೆ ಪ್ರಸ್ತುತ ವರ್ಷ ಸಾವಿಗೀಡಾದವರ ಸಂಖ್ಯೆ 54 ಆಗಿದೆ. 2010ರ ನಂತರದ ಅಂಕಿ ಅಂಶಗಳ ಪ್ರಕಾರ ಉಗ್ರರ ದಾಳಿಗೆ ಅತೀ ಹೆಚ್ಚು ಮಂದಿ ಬಲಿಯಾದ ವರ್ಷ 2017 ಆಗಿದೆ.

(ಕೃಪೆ:ಸೌತ್ ಏಷ್ಯಾ ಟೆರರಿಸಂ ಪೋರ್ಟಲ್)

* ವಿವಿಧ ರೀತಿಯ ಉಗ್ರ ದಾಳಿಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ 2015ರಲ್ಲಿ ರಕ್ಷಣಾ ಪಡೆಯ 41 ಯೋಧರು ಹುತಾತ್ಮರಾಗಿದ್ದಾರೆ. 2016ರಲ್ಲಿ 88 ಮಂದಿ ಹುತಾತ್ಮರಾದರೆ  2017ರಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 70.

(ಕೃಪೆ:ಸೌತ್ ಏಷ್ಯಾ ಟೆರರಿಸಂ ಪೋರ್ಟಲ್)

* ಸೈನ್ಯವೂ ಪ್ರಬಲವಾದಾಗ ಉಗ್ರರ ಹತ್ಯೆಯಲ್ಲಿಯೂ ಏರಿಕೆ ಕಂಡಿದೆ. 2015ರಲ್ಲಿ  113 ಉಗ್ರರ ಹತ್ಯೆಯಾಗಿದೆ. 2016ರಲ್ಲಿ ಹತ್ಯೆಯಾದವರ ಸಂಖ್ಯೆ 165 ಮತ್ತು  2017ರಲ್ಲಿ ಇಲ್ಲಿಯವರೆಗೆ ಹತ್ಯೆಯಾದ ಉಗ್ರರ ಸಂಖ್ಯೆ 182.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.