ADVERTISEMENT

ಕಾಶ್ಮೀರ ವಿವಾದ: ಮಾತುಕತೆಗೆ ಹುರಿಯತ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST

ಶ್ರೀನಗರ (ಪಿಟಿಐ): ದಶಕಗಳಿಂದ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಕಗ್ಗಂಟಾಗಿರುವ ಕಾಶ್ಮೀರ ವಿವಾದ­ವನ್ನು ಸಂಪೂರ್ಣವಾಗಿ ಇತ್ಯರ್ಥ ಪಡಿಸಿ­ಕೊಳ್ಳಲು ಎರಡೂ ದೇಶಗಳು ಮಾತು­ಕತೆಗೆ ದಿಟ್ಟತನದಿಂದ ಮುಂದಾ­ಗ­ಬೇಕು ಎಂದು ಹುರಿಯತ್‌ ಕಾನ್ಫರೆನ್ಸ್‌ನ ಸೌಮ್ಯವಾದಿಗಳ ಗುಂಪು ಒತ್ತಾಯಿಸಿದೆ.

‘ಪಾಕಿಸ್ತಾನದಲ್ಲಿ ನವಾಜ್‌ ಅವರ ಪಕ್ಷಕ್ಕೆ ಮತ್ತು ಭಾರತದಲ್ಲಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷಕ್ಕೆ ಆಯಾ ದೇಶದ ಜನರು ಸ್ಪಷ್ಟ ಬಹುಮತ ನೀಡಿದ್ದಾರೆ.

ಆದ್ದರಿಂದ ಈ ಮುಖಂಡರು ಕಾಶ್ಮೀರ ವಿವಾದವನ್ನು ಪರಿಪೂರ್ಣವಾಗಿ ಬಗೆಹರಿಸಿಕೊಳ್ಳಲು ದೃಢವಾದ ಹೆಜ್ಜೆ ಇರಿಸಲು ಇದು ಸಕಾಲ’ ಎಂದು ಹುರಿಯತ್‌ ಕಾನ್ಫರೆನ್ಸ್‌ ಸೌಮ್ಯವಾದಿ ಗುಂಪಿನ ಅಧ್ಯಕ್ಷ ಮಿರ್‌ವೈಜ್‌ ಉಮರ್‌ ಫಾರೂಕ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕಾಶ್ಮೀರ ವಿವಾದ ಬಗೆಹರಿದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿ ಕನಸು ನನಸಾ­ಗುತ್ತದೆ. ಇಂತಹ ಪ್ರಕ್ರಿಯೆಯನ್ನು ಉಭಯ ದೇಶಗಳ ಮುಖಂಡರು ಜರೂರಾಗಿ ಆರಂಭಿಸಬೇಕು ಎಂಬುದು ನಮ್ಮ ಆಶಯ’ ಎಂದು ಉಮರ್‌ ಫಾರೂಕ್‌  ಹೇಳಿದ್ದಾರೆ.

‘ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿ­ಸುವ ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ನೈಜ ಪಾಲು­ದಾರರನ್ನಾಗಿ ಮತ್ತು ಸಕ್ರಿಯ­ವಾಗಿ ತೊಡಗಿಸಿಕೊಳ್ಳಬೇಕು. ಈ ವಿವಾದ ಇತ್ಯರ್ಥಕ್ಕೆ ಕಂಡುಕೊಳ್ಳುವ ಮಾರ್ಗೋಪಾಯದಲ್ಲಿ ಕಾಶ್ಮೀರಿಗಳ ಪಾತ್ರ ಕಡ್ಡಾಯವಾಗಿ ಇರ­ಬೇ­ಕೆಂಬುದು ನಮ್ಮ ಹಂಬಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.