ADVERTISEMENT

ಕೃಷಿ ಕ್ಷೇತ್ರದಲ್ಲಿ ಹಿನ್ನಡೆ: ದೇವೇಗೌಡ

ಭೇಟಿಗೆ ಆಹ್ವಾನ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ; 45 ನಿಮಿಷಗಳ ಕಾಲ ಮಾತುಕತೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ನವದೆಹಲಿ: ‘ಎನ್‌ಡಿಎ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ಕೃಷಿ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಹೇಳಿದ್ದಾರೆ.

ಅಧಿಕೃತ ಆಹ್ವಾನದ ಮೇಲೆ ಪ್ರಧಾನಿ ಅವರನ್ನು ಬುಧವಾರ ಸಂಜೆ ದೇವೇಗೌಡರು ಭೇಟಿ ಮಾಡಿ ಸುಮಾರು 45 ನಿಮಿಷ ಚರ್ಚಿಸಿದರು. ಮೋದಿ ಅವರು ಕಳೆದ ವಾರ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು.

ವಿವಿಧ ರಾಜ್ಯಗಳಲ್ಲಿ ಅತಿವೃಷ್ಟಿಯಿಂದಾಗಿರುವ ಬೆಳೆ ಹಾನಿ, ಬೆಂಗಳೂರು– ಮೈಸೂರು ಕಾರಿಡಾರ್‌ ಯೋಜನೆ,  ಕೇಂದ್ರ ಸರ್ಕಾರದ ಉದ್ದೇಶಿತ ಭೂಸ್ವಾಧೀನ ಮಸೂದೆ ಕುರಿತು ಪ್ರಸ್ತಾಪಿಸಿದ್ದಾಗಿ ದೇವೇಗೌಡರು ಅನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಒಂದು ವರ್ಷದಲ್ಲಿ ನೀವು ಅನೇಕ ದೇಶಗಳಿಗೆ ಭೇಟಿ ಕೊಟ್ಟು ವಿದೇಶಾಂಗ ನೀತಿ ಸುಧಾರಿಸಲು ಪ್ರಯತ್ನಿಸಿದ್ದೀರಿ. ಆದರೆ, ಈ ಅವಧಿಯಲ್ಲಿ ಕೃಷಿ ಕ್ಷೇತ್ರ ಹಿಂದೆ ಬಿದ್ದಿದೆ. ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ ಮತ್ತು ಕಾಶ್ಮೀರ ಒಳಗೊಂಡಂತೆ ಕೆಲವು ರಾಜ್ಯಗಳಲ್ಲಿ ಮೋಡ ಸ್ಫೋಟ ಮತ್ತು ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ’ ಎಂದು ಪ್ರಧಾನಿ ಅವರಿಗೆ ಹೇಳಿರುವುದಾಗಿ ವಿವರಿಸಿದರು.

‘ರೈತನ ಮಗನಾಗಿ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೇನೆ. ಸಿಕ್ಕಿರುವ ಅವಕಾಶ ಸರಿಯಾಗಿ ಬಳಸಿಕೊಂಡಿದ್ದೇನೆ. ಈ ವಿಷಯದಲ್ಲಿ ಆತ್ಮವಂಚನೆ ಮಾಡಿಕೊಳ್ಳಲು ಇಷ್ಟವಿಲ್ಲ. ಸಂಕಷ್ಟದಲ್ಲಿರುವ ಕೃಷಿಕರು ಕೇಂದ್ರ, ರಾಜ್ಯ ಸರ್ಕಾರದಿಂದ ನೆರವು ನಿರೀಕ್ಷಿಸುತ್ತಿದ್ದಾರೆ’ ಎಂದರು.

‘ನನ್ನ ಸಲಹೆಯನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದಾರೆ. ಗುಜರಾತ್‌ ಮಾದರಿಯಲ್ಲಿ ಕೃಷಿ ಕ್ಷೇತ್ರ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದಾರೆ. ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ಶೇ 10ರ ಪ್ರಮಾಣದಲ್ಲಿ ಕೃಷಿ ಕ್ಷೇತ್ರದ ಪ್ರಗತಿ ಮಾಡಿದ್ದಾಗಿ ವಿವರಿಸಿದ್ದಾರೆ’ ಎಂದೂ ಗೌಡರು ನುಡಿದರು.

‘ನಮ್ಮ ಮಾತುಕತೆ ಸಮಯದಲ್ಲಿ ಉದ್ದೇಶಿತ ಭೂಸ್ವಾಧೀನ ಮಸೂದೆ ಕುರಿತು ಚರ್ಚಿಸಲಾಯಿತು. ಜಮೀನಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಸಮ್ಮತವಾದ ಪರಿಹಾರ ಕೊಡಬೇಕು. ಕೃಷಿಕರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಸರಿಯಾದ ರೀತಿಯಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದೂ ಕಿವಿ ಮಾತು ಹೇಳಿರುವುದಾಗಿ ಗೌಡರು ನುಡಿದರು.

ರಿಯಲ್ ಎಸ್ಟೇಟ್‌ ವಿರುದ್ಧ ಎಚ್ಚರಿಕೆ: ‘ಬೆಂಗಳೂರು– ಮೈಸೂರು ಕಾರಿಡಾರ್‌ ಯೋಜನೆ ನನ್ನ ಕನಸಿನ ಯೋಜನೆ. ಅದು ಏನಾಗಿದೆ ಎಂಬುದನ್ನು ಪ್ರಧಾನಿ ಗಮನಕ್ಕೆ ತಂದಿದ್ದೇನೆ. ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಜಮೀನು ಕಿತ್ತುಕೊಂಡು ರಿಯಲ್‌ ಎಸ್ಟೇಟ್‌ ದಂಧೆ ಮಾಡಿದರೆ ಜನ ನಂಬುವುದಿಲ್ಲ’ ಎಂದೂ ಮೋದಿ ಅವರಿಗೆ ಎಚ್ಚರಿಸಿರುವುದಾಗಿ ಮಾಜಿ ಪ್ರಧಾನಿ ತಿಳಿಸಿದರು.

‘ಖಾಸಗಿ ಹಾಗೂ ಸರ್ಕಾರಿ (ಪಿಪಿಪಿ) ಪಾಲುದಾರಿಕೆಯ ಯೋಜನೆಗಳನ್ನು ಸಿಎಜಿ ಪರಿಶೀಲನೆಗೊಳಪಡಿಸಬೇಕೆಂದು ಒತ್ತಾಯ ಮಾಡಿ ಮೋದಿ ಅವರಿಗೆ ಪತ್ರ ಮೊದಲೇ ಬರೆದಿದ್ದೇನೆ. ನಮ್ಮ ಮಾತುಕತೆ ವೇಳೆ ಮತ್ತೊಮ್ಮೆ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಈ ಪತ್ರವನ್ನು ಭೂಸ್ವಾಧೀನ ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಜಂಟಿ ಸದನ ಸಮಿತಿಗೂ ಕಳುಹಿಸುತ್ತೇನೆ’ ಎಂದರು ಮಾಜಿ ಪ್ರಧಾನಿ.

‘ಮೋದಿ ಅವರ ಜತೆಗಿನ ಮಾತುಕತೆ ಸಮಾಧಾನ ತಂದಿದೆ. ಮೊದಲ ಬಾರಿಗೆ ಪ್ರಧಾನಿಯೊಬ್ಬರು ಮಾಜಿ ಪ್ರಧಾನಿಗಳನ್ನು ಕರೆದು ಸಲಹೆ ಕೇಳಿದ್ದಾರೆ. ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ವರ್ಷಕ್ಕೊಮ್ಮೆ ನಾನೇ ಹೋಗಿ ಭೇಟಿ ಮಾಡುತ್ತಿದ್ದೆ’ ಎಂದೂ ದೇವೇಗೌಡರು ಸ್ಮರಿಸಿದರು.

‘ಕೇಂದ್ರ ಸರ್ಕಾರ ಅಂಗೀಕರಿಸಲು ಹೊರಟಿರುವ ಭೂಸ್ವಾಧೀನ ಮಸೂದೆಯನ್ನು ಬೆಂಬಲಿಸುವ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ. ಮಸೂದೆಗೆ ಕೆಲವು ತಿದ್ದುಪಡಿ ಸೂಚಿಸಿದ್ದೇನೆ. ಅಂತಿಮವಾಗಿ ಅದು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಜೆಡಿಎಸ್‌ ವರಿಷ್ಠರೂ ಆಗಿರುವ ಗೌಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT