ADVERTISEMENT

ಕೃಷ್ಣಮೃಗ ಬೇಟೆ ಪ್ರಕರಣ: ನಟ ಸಲ್ಮಾನ್‌ ಖಾನ್‌ಗೆ ಜಾಮೀನು ಮಂಜೂರು

ಏಜೆನ್ಸೀಸ್
Published 7 ಏಪ್ರಿಲ್ 2018, 10:36 IST
Last Updated 7 ಏಪ್ರಿಲ್ 2018, 10:36 IST
ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್   

ಜೋಧಪುರ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇಲ್ಲಿನ ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಶನಿವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಜೋಷಿ, ‘ಇಬ್ಬರ ಶ್ಯೂರಿಟಿ ಜತೆಗೆ ₹50,000 ಠೇವಣಿ ಇರಿಸಬೇಕು’ ಎಂಬ ಷರತ್ತು ವಿಧಿಸಿ ಜಾಮೀನು ನೀಡಿದರು.

ವಿಚಾರಣೆ ವೇಳೆ ಸಲ್ಮಾನ್‌ ಸಹೋದರಿಯರಾದ ಅಲ್ವಿರಾ, ಅರ್ಪಿತಾ ಕೋರ್ಟ್‌ನಲ್ಲಿ ಹಾಜರಿದ್ದರು.

ADVERTISEMENT

ಎರಡು ದಿನ ಜೋಧಪುರ ಕೇಂದ್ರೀಯ ಕಾರಾಗೃಹದಲ್ಲಿ ಕಳೆದಿರುವ ಸಲ್ಮಾನ್‌ ಖಾನ್‌ ಶನಿವಾರ ಸಂಜೆ ವೇಳೆಗೆ ಕಾರಾಗೃಹದಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. 

ಶುಕ್ರವಾರ ಸಲ್ಮಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ರವೀಂದ್ರ ಕುಮಾರ್ ಜೋಷಿ ನಿರ್ಣಯವನ್ನು ಶನಿವಾರಕ್ಕೆ ಕಾಯ್ದಿರಿಸಿದ್ದರು.

ಬೇಟೆ ಸಂದರ್ಭದಲ್ಲಿ ಸಲ್ಮಾನ್‌ ಅವರ ಜತೆಗಿದ್ದ ನಟರಾದ ಸೈಫ್‌ ಅಲಿ ಖಾನ್‌, ತಬು, ನೀಲಂ ಮತ್ತು ಸೋನಾಲಿ ಬೇಂದ್ರೆ ಹಾಗೂ ಸ್ಥಳೀಯ ವ್ಯಕ್ತಿ ದುಷ್ಯಂತ್‌ ಸಿಂಗ್‌ ಅವರನ್ನು ಕೋರ್ಟ್‌ ಖುಲಾಸೆ ಮಾಡಿತ್ತು.

1998ರ ಅಕ್ಟೋಬರ್‌ನಲ್ಲಿ ರಾಜಸ್ಥಾನದ ಜೋಧಪುರ ಸಮೀಪದ ಹಳ್ಳಿಯಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ದೋಷಿ ಎಂದು ನ್ಯಾಯಾಲಯ ಹೇಳಿತ್ತು. ಅಲ್ಲದೆ, ವನ್ಯಮೃಗ ಸಂರಕ್ಷಣೆ ಕಾಯ್ದೆಯ 9/51ನೇ ಸೆಕ್ಷನ್‌ ಅಡಿಯಲ್ಲಿ ಐದು ವರ್ಷ ಜೈಲು ಶಿಕ್ಷೆ ಮತ್ತು  ₹10 ಸಾವಿರ ದಂಡ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿತ್ತು. ಸದ್ಯ ಸಲ್ಮಾನ್ ಅವರನ್ನು ಜೋಧಪುರ ಕೇಂದ್ರೀಯ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.