ADVERTISEMENT

ಕೃಷ್ಣಾ ನದಿ ನೀರು ಹಂಚಿಕೆ ವಿವಾದ

‘ಇತ್ಯರ್ಥಕ್ಕೆ ಮಾತುಕತೆಯೇ ಮಾರ್ಗ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

ಹೈದರಾಬಾದ್‌ (ಪಿಟಿಐ): ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಬಗೆಹರಿಯಲು ಮಾತುಕತೆಯೇ ಸೂಕ್ತ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್‌ ಗುರುವಾರ ಸಲಹೆ ನೀಡಿದ್ದಾರೆ.

ಶ್ರೀಶೈಲಂ ಅಣೆಕಟ್ಟೆ ನೀರು ಬಳಕೆ ವಿಚಾರವಾಗಿ ಎರಡೂ ರಾಜ್ಯಗಳ ಮಧ್ಯೆ ವಿವಾದ ಉಂಟಾಗಿರುವುದರಿಂದ ರಾಜ್ಯ ಪಾಲರು ಈ ಸಲಹೆ ನೀಡಿದ್ದಾರೆ.‘ಎರಡೂ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ. ಆದರೆ, ಈ ವಿವಾದವನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಉಭಯ ರಾಜ್ಯಗಳ ಮುಖ್ಯಮಂತ್ರಿ­ಗಳಿಗೆ ಈಗಾಗಲೇ ತಿಳಿಸಿದ್ದೇನೆ’ ಎಂದು ರಾಜಭನದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಅನೌಪಚಾರಿಕವಾಗಿ ಮಾತನಾಡಿದ ಅವರು ಹೇಳಿದರು.

ವಿದ್ಯುತ್‌ ಉತ್ಪಾದನೆಗಾಗಿ ಶ್ರೀಶೈಲಂ ಅಣೆಕಟ್ಟೆಯ ಎಡದಂಡೆ ನಾಲೆ ಮೂಲಕ ತೆಲಂಗಾಣ ನೀರು ಹರಿಸಿಕೊಳ್ಳುತ್ತಿದೆ. ಇದು ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಮಂಡಳಿಯ ಆದೇಶಕ್ಕೆ ವಿರುದ್ಧ­ವಾದುದು ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ.

ಈಗ ಅಣೆಕಟ್ಟೆಯಲ್ಲಿರುವ ನೀರು ಕುಡಿಯುವ ನೀರು ಮತ್ತು ವ್ಯವಸಾಯದ ಬಾಕಿ ಬಾಬ್ತಿಗೆ ಸಾಕಾಗುತ್ತದೆ. ತೆಲಂಗಾಣ ವಿದ್ಯುತ್‌ ಉತ್ಪಾದನೆಗೆ ನೀರು ಹರಿಸಿಕೊಂಡರೆ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಕನಿಷ್ಠ ಮಟ್ಟಕ್ಕೆ (857.6 ಅಡಿ) ಇಳಿಯುತ್ತದೆ. ಇದರಿಂದ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ ಎಂದು ಆಂಧ್ರ­ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಬುಧವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.