ADVERTISEMENT

ಕೇಂದ್ರ ನೌಕರರಿಗೆ ‘ಅಚ್ಛೇದಿನ್'

7ನೇ ವೇತನ ಆಯೋಗ ಶಿಫಾರಸುಗಳಿಗೆ ಕೇಂದ್ರದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 23:30 IST
Last Updated 29 ಜೂನ್ 2016, 23:30 IST
ಕೇಂದ್ರ ನೌಕರರಿಗೆ ‘ಅಚ್ಛೇದಿನ್'
ಕೇಂದ್ರ ನೌಕರರಿಗೆ ‘ಅಚ್ಛೇದಿನ್'   

ನವದೆಹಲಿ/ಚೆನ್ನೈ (ಪಿಟಿಐ): ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಸುಮಾರು ಒಂದು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ‘ಬಂಪರ್‌’ ದೊರೆತಿದ್ದು, ಮೂಲವೇತನ ಹಾಗೂ ಭತ್ಯೆ ಸೇರಿ ಒಟ್ಟಾರೆ ವೇತನದಲ್ಲಿ ಶೇ 23.55 ರಷ್ಟು ಹೆಚ್ಚಳವಾಗಲಿದೆ. ಹೊಸ ವೇತನ 2016ರ ಜನವರಿ 1ರಿಂದ ಅನ್ವಯವಾಗಲಿದೆ.

‘ಏಳನೇ ವೇತನ ಆಯೋಗದ ಹೆಚ್ಚಿನ ಎಲ್ಲ ಶಿಫಾರಸುಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಾಕಿ ವೇತನವನ್ನು ಇದೇ ವರ್ಷ ಪಾವತಿ ಮಾಡಲಾಗುವುದು’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ವೇತನ ಆಯೋಗದ ಶಿಫಾರಸು ಜಾರಿಯಿಂದ 47 ಲಕ್ಷ ನೌಕರರು ಹಾಗೂ 53 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 1.02 ಲಕ್ಷ ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.  ಈ ಹೊರೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ0.7 ರಷ್ಟಾಗಲಿದೆ. ಆರನೇ ವೇತನ ಆಯೋಗದಿಂದ ಸರ್ಕಾರದ ಬೊಕ್ಕಸಕ್ಕೆ ₹ 40 ಸಾವಿರ ಕೋಟಿ ಹೊರೆ ಬಿದ್ದಿತ್ತು.

ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ₹7 ಸಾವಿರದಿಂದ ₹18 ಸಾವಿರಕ್ಕೆ ಹೆಚ್ಚಲಿದೆ.  ಕಾರ್ಯದರ್ಶಿಗಳ ಸಮಿತಿಯು ಕನಿಷ್ಠ ವೇತನವನ್ನು ₹23,500 ಮತ್ತು ಗರಿಷ್ಠ ವೇತನವನ್ನು ₹3.25 ಲಕ್ಷಕ್ಕೆ ಏರಿಸಲು ಶಿಫಾರಸು ಮಾಡಲು ಬಯಸಿತ್ತು. ಆದರೆ 2016–17ನೇ ಸಾಲಿನ ಬಜೆಟ್‌ನಲ್ಲಿ ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಅಗತ್ಯವಾದ ಅನುದಾನ ಮೀಸಲಿರಿಸಲಾಗಿಲ್ಲ. ಹಾಗಾಗಿ ಈ ಶಿಫಾರಸು ಮಾಡಲಾಗಿಲ್ಲ.

7ನೇ ವೇತನ ಆಯೋಗವನ್ನು ಯುಪಿಎ ಸರ್ಕಾರ 2014ರ ಫೆಬ್ರುವರಿಯಲ್ಲಿ ನೇಮಿಸಿತ್ತು. ಸಂಪುಟ ಕಾರ್ಯರ್ಶಿ ಪಿ.ಕೆ. ಸಿನ್ಹಾ ಅವರ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು ಆಯೋಗದ ಶಿಫಾರಸುಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಏರಿಕೆಯ ಪ್ರಮಾಣ ಕಡಿಮೆ: ವೇತನ ಆಯೋಗವು ಮೂಲ ವೇತನದಲ್ಲಿ ಶೇಕಡ 14.27 ರಷ್ಟು ಏರಿಸಲು ಶಿಫಾರಸು ಮಾಡಿದೆ. ಕಳೆದ 70 ವರ್ಷಗಳಲ್ಲಿ ಇಷ್ಟು ಕಡಿಮೆ  ಶಿಫಾರಸು ಮಾಡಿದ್ದು ಇದೇ ಮೊದಲು.

6ನೇ ವೇತನ ಆಯೊಗವು ಮೂಲ ವೇತನದಲ್ಲಿ ಶೇ 20ರಷ್ಟು  ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಆದರೆ ಸರ್ಕಾರ 2008ರಲ್ಲಿ ಶಿಫಾರಸು ಜಾರಿ ಮಾಡುವಾಗ ದುಪ್ಪಟ್ಟು ಹೆಚ್ಚಳ ಮಾಡಿತ್ತು.

ಒಪ್ಪಲಾಗದು–ನೌಕರರ ಒಕ್ಕೂಟ: ಏಳನೇ ವೇತನ ಆಯೋಗದ ಶಿಫಾರಸು ‘ಒಪ್ಪಲಾಗದು’ ಎಂದು ಕೇಂದ್ರ ಸರ್ಕಾರಿ ನೌಕರರ ಒಕ್ಕೂಟ ಹೇಳಿದ್ದು, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

‘ಈಗಿನ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದಾಗ ಈ ಹೆಚ್ಚಳ ಏನೇನೂ ಸಾಲದು. ಶಿಫಾರಸನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಒಕ್ಕೂಟದ ಕಾರ್ಯದರ್ಶಿ ಎಂ. ದುರೈಪಾಂಡ್ಯನ್‌ ಹೇಳಿದ್ದಾರೆ.

‘ವೇತನ ಹೆಚ್ಚಳವನ್ನು ಪರಿಷ್ಕರಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸದಿದ್ದರೆ ಜುಲೈ 4 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ’ ಎಂದಿದ್ದಾರೆ.
ಆರೆಸ್ಸೆಸ್‌ ಬೆಂಬಲಿತ ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ಸೇರಿದಂತೆ ಹಲವು ವ್ಯಾಪಾರ ಒಕ್ಕೂಟಗಳು ಕೂಡಾ ಶಿಫಾರಸನ್ನು ತಿರಸ್ಕರಿಸಿವೆ. ಜುಲೈ 8ರಂದು ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಎಂಎಸ್‌ ಹೇಳಿದೆ.

* ಹೊಸದಾಗಿ ನೌಕರಿಗೆ ಸೇರುವ ಕೇಂದ್ರ ಸರ್ಕಾರದ ‘ಎ’ ಶ್ರೇಣಿಯ (ಕ್ಲಾಸ್‌ 1) ಅಧಿಕಾರಿಯ ಆರಂಭಿಕ ವೇತನ ₹ 56,100 ಇರಲಿದೆ

* ಸರ್ಕಾರಿ ನೌಕರರು ಆಗಸ್ಟ್‌ ತಿಂಗಳಿನಿಂದ 2.5 ಪಟ್ಟು ಅಧಿಕ ಮೂಲವೇತನ ಪಡೆಯಲಿದ್ದಾರೆ

* ಗ್ರ್ಯಾಚುಟಿ ಮಿತಿಯನ್ನು ₹ 10 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ

* ಮನೆ ನಿರ್ಮಾಣದ ಮುಂಗಡದ ಮೇಲಿನ ಮಿತಿ ₹ 7.5 ಲಕ್ಷದಿಂದ ₹ 25 ಲಕ್ಷಕ್ಕೆ ಹೆಚ್ಚಳ

* ಈಗ ಇರುವ ವೇತನ ಶ್ರೇಣಿ ಮತ್ತು ಹುದ್ದೆಗೆ ಸಂಬಂಧಪಟ್ಟ ವೇತನಗಳು ಹೊಸ ವೇತನ ಶ್ರೇಣಿಯಿಂದಾಗಿ ರದ್ದಾಗಲಿವೆ

* ನಾಗರಿಕ ಸೇವೆ ಸಿಬ್ಬಂದಿ, ರಕ್ಷಣಾ ಇಲಾಖೆ ಸಿಬ್ಬಂದಿ ಮತ್ತು ರಕ್ಷಣಾ ಇಲಾಖೆಯ ನರ್ಸಿಂಗ್‌ ಸೇವೆ ಸಿಬ್ಬಂದಿಗೆ ಪ್ರತ್ಯೇಕ ವೇತನ ಪಟ್ಟಿ ಸಿದ್ಧಪಡಿಸಲಾಗುವುದು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.