ADVERTISEMENT

ಕೇಜ್ರಿವಾಲ್ ಪ್ರತಿಭಟನೆ: ಸುಪ್ರೀಂ ನೋಟಿಸ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2014, 10:17 IST
Last Updated 24 ಜನವರಿ 2014, 10:17 IST
ಕೇಜ್ರಿವಾಲ್ ಪ್ರತಿಭಟನೆ: ಸುಪ್ರೀಂ ನೋಟಿಸ್
ಕೇಜ್ರಿವಾಲ್ ಪ್ರತಿಭಟನೆ: ಸುಪ್ರೀಂ ನೋಟಿಸ್   

ನವದೆಹಲಿ (ಐಎಎನ್‌ಎಸ್‌): ಸಾಂವಿಧಾನಿಕ ಸ್ಥಾನವನ್ನು ಹೊಂದಿರುವಾಗ ಧರಣಿ ನಡೆಸುವ ಮೂಲಕ ಕಾನೂನು ಉಲ್ಲಂಘಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್, ಶುಕ್ರವಾರ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಮೂರ್ತಿ ಆರ್‌ ಎಂ ಲೋಧಾ ನೇತೃತ್ವದ ಪೀಠ, ಗೃಹ ಕಾರ್ಯದರ್ಶಿ ಮೂಲಕ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. ಈ ವೇಳೆ, ವಕೀಲರೂ ಆಗಿರುವ ಅರ್ಜಿದಾರ ಎಂ ಎಲ್ ಶರ್ಮಾ ಅವರು ‘ಕಾನೂನು ನಿರೂಪಕರೇ ಕಾನೂನನ್ನು ಮುರಿಯಲು ಸಾಧ್ಯವಿಲ್ಲ’ ಎಂದು ವಾದಿಸಿದರು. ಇದರಿಂದ ಭಿನ್ನ ವ್ಯಕ್ತಿತ್ವಗಳು ಇರಲು ಸಾಧ್ಯವಿಲ್ಲ ಎಂದು ಗಮನಿಸಿದ ಪೀಠ, ದೆಹಲಿ ಸರ್ಕಾರಕ್ಕೂ ನೋಟಿಸ್ ಜಾರಿಗೊಳಿಸಿತು.

ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ, ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಆರು ವಾರಗಳ ಕಾಲಾವಕಾಶ ನೀಡಿದೆ.

ADVERTISEMENT

ವಕೀಲ ಎನ್ ರಾಜಾರಾಮನ್ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ಆದೇಶದಲ್ಲಿ ‘ಅಪರಾಧ ದಂಡ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾಗಿಯೂ ಕಾನೂನು ಅನುಷ್ಠಾನ ವ್ಯವಸ್ಥೆ/ ಪೊಲೀಸರು, ಐವರು ಅಥವಾ ಅದಕ್ಕೂ ಹೆಚ್ಚು ಜನರು ಅಕ್ರಮವಾಗಿ ಗುಂಪುಗೂಡಲು ಅವಕಾಶ ಏಕೆ ನೀಡಿದ್ದರು’ ಎಂದು ಕೇಳಿತು.

‘ಅಕ್ರಮವಾಗಿ ಜಮಾವಣೆಗೊಂಡ ಜನರನ್ನು ಚದುರಿಸುವಂತೆ ಹೇಳಿದ ಬಳಿಕ ಅಂತಹ ಗುಂಪನ್ನು ಚದುರಿಸಲು ಪೊಲೀಸರು ಸೂಕ್ತ ಕ್ರಮಕೈಗೊಂಡರೇ ಹಾಗೂ ಅಂತಹ ಆದೇಶದ ಹೊರತಾಗಿಯೂ ಜಮಾವಣೆಗೊಂಡ ಜನರು ಚದುರಲಿಲ್ಲವೇ’ ಎಂದೂ ನ್ಯಾಯಾಲಯ ಪ್ರಶ್ನಿಸಿತು.

ಏತನ್ಮಧ್ಯೆ, ನಿಷೇಧಾಜ್ಞೆ ಅನುಷ್ಠಾನ ಸಂಬಂಧಿ ಎರಡು ಪ್ರಶ್ನೆಗಳಿಗೆ ಉತ್ತರಿಸಲು ಉಭಯ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನ್ಯಾಯಾಲಯ 2014ರ ಜನವರಿ 31ವರೆಗೆ ಕಾಲಾವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.