ADVERTISEMENT

ಕೊನೆಗೂ ಹೆಸರು ಬಹಿರಂಗ

ಜರ್ಮನಿ ಲೀಷ್‌ಟೆನ್‌ಸ್ಟೀನ್‌ ಎಲ್‌ಜಿಟಿ ಬ್ಯಾಂಕ್‌ನಲ್ಲಿ ಕಪ್ಪುಹಣ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2014, 6:10 IST
Last Updated 30 ಏಪ್ರಿಲ್ 2014, 6:10 IST

ನವದೆಹಲಿ (ಪಿಟಿಐ): ಮೂರು ವರ್ಷಗಳಿಂದ ಹೆಸರು ಬಹಿರಂಗ­ಗೊಳಿಸದೆ ಸತಾಯಿಸುತ್ತಿದ್ದ ಕೇಂದ್ರ ಸರ್ಕಾರವು, ಜರ್ಮನಿಯ ಲೀಷ್‌ಟೆನ್‌­ಸ್ಟೀನ್‌ ಎಲ್‌ಜಿಟಿ ಬ್ಯಾಂಕ್‌ನಲ್ಲಿ ಕಪ್ಪು ಹಣ ಠೇವಣಿ ಇಟ್ಟಿ­ದ್ದಾರೆ ಎನ್ನಲಾದ 18 ಜನರ ಪಟ್ಟಿಯನ್ನು ಕಡೆಗೂ ಮಂಗಳವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿತು. ಈ 18 ಜನರ ವಿರುದ್ಧ ಆದಾಯ ತೆರಿಗೆ ಇಲಾಖೆ ವಿಚಾರಣೆಯನ್ನೂ ಈಗಾಗಲೇ ಆರಂಭಿಸಿದೆ.

ಕೇಂದ್ರವು ಸುಪ್ರೀಂ­ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ­­ಪತ್ರದಲ್ಲಿ ಮೋಹನ್‌ ಮನೋಜ್‌ ಧೂಪೀಲಿಯಾ, ಅಂಬ­ರೀಷ್‌ ಮನೋಜ್‌ ಧೂಪೀಲಿಯಾ, ಭವ್ಯ ಮನೋಜ್‌ ಧೂ­ಪೀಲಿಯಾ, ಮನೋಜ್‌ ಧೂಪೀಲಿಯಾ ಮತ್ತು ರೂಪಾಲ್‌ ಧೂಪೀಲಿಯಾ ಅವರು ಹೆಸರುಗಳು ಇವೆ. ಇವರೆಲ್ಲರೂ ‘ಅಂಬ್ರುನೋವಾ ಟ್ರಸ್‌್ಟ ಅಂಡ್‌ ಮಾರ್ಲೈನ್‌  ಮ್ಯಾನೇಜ್‌ಮೆಂಟ್‌ಗೆ ಸೇರಿದವರು.

ಎಲ್‌ಜಿಟಿ ಬ್ಯಾಂಕ್‌ನಲ್ಲಿ ಖಾತೆದಾರ­ರಾಗಿದ್ದು ಯಾರ ವಿರುದ್ಧದ ತನಿಖೆ ಕೈಗೊಳ್ಳಲಾಗಿದೆಯೋ ಅವರ ಹೆಸರು­ಗಳ ಪಟ್ಟಿ ಸಲ್ಲಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ರಾಂ ಜೇಠ್ಮಲಾನಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಅದರ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿಯನ್ನು ಸಲ್ಲಿಸಿದೆ.

ಮನೀಚಿ ಟ್ರಸ್‌್ಟನ ಹಸ್ಮುಖ್‌ ಈಶ್ವರ್‌ಲಾಲ್‌ ಗಾಂಧಿ, ಚಿಂತನ್‌ ಹಸ್ಮುಖ್‌ ಗಾಂಧಿ, ಮಧು ಹಸ್ಮುಖ್‌ ಗಾಂಧಿ ಹಾಗೂ ದಿವಂಗತ ಮೀರವ್‌ ಹಸ್ಮುಖ್‌ ಗಾಂಧಿ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ಪುರಾವೆಗಳು ಸಿಕ್ಕಿವೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.

ರುವಿಶಾ ಟ್ರಸ್‌್ಟನ ಚಂದ್ರಕಾಂತ್‌ ಈಶ್ವರ್‌ಲಾಲ್‌ ಗಾಂಧಿ, ರಾಜೇಶ್‌ ಚಂದ್ರಕಾಂತ್‌ ಗಾಂಧಿ, ವೀರಜ್‌ ಚಂದ್ರ­ಕಾಂತ್‌ ಗಾಂಧಿ ಮತ್ತು ಧನಲಕ್ಷ್ಮಿ ಚಂದ್ರಕಾಂತ್‌ ಗಾಂಧಿ ಅವರ ವಿಚಾರಣೆ ಆರಂಭವಾಗಿದೆ ಎಂಬುದನ್ನು ಸರ್ಕಾ­ರವು ಕೋರ್ಟ್‌ನ ಗಮನಕ್ಕೆ ತಂದಿತು.

ಡಯಾನೀಸ್‌ ಸ್ಟಿಫ್‌ತುಂಗ್‌ ಮತ್ತು ಡ್ರೇಯ್ಡ್‌ ಸ್ಯಾತಿಫ್‌ಟುನ್ಫ್ ಟ್ರಸ್‌್ಟನ ಅರುಣ್‌ಕುಮಾರ್‌ ರಮಣಿಕ್‌ಲಾಲ್‌ ಮೆಹ್ತಾ, ಹರ್ಷದ್‌ ರಮಣಿಕ್‌ಲಾಲ್‌ ಮೆಹ್ತಾ, ವೆಬ್‌ಸ್ಟರ್‌ ಫೌಂಡೇಷನ್‌ದ ಕೆ.ಎಂ.ಮ್ಯಾಮೆನ್‌, ಊರ್ವಶಿ ಫೌಂಡೇಷನ್‌ದ ಅರುಣ್‌ ಕೊಚ್ಚಾರ್‌ ಮತ್ತು ರಾಜ್‌ ಫೌಂಡೇಷನ್‌ ಅವರ ಅಶೋಕ್‌ ಜೈಪೂರಿಯಾ ಅವರ ಹೆಸರೂಗಳೂ ಸರ್ಕಾರ ಸಲ್ಲಿಸಿದ ಪಟ್ಟಿಯಲ್ಲಿವೆ.

ಇದೇ ವೇಳೆ, ತೆರಿಗೆ ವಂಚನೆಗೆ ಸಂಬಂಧಿಸಿದ ಇತರ ಎಂಟು ಪ್ರಕರಣ­ಗಳಲ್ಲಿ, ಯಾರ ವಿರುದ್ಧ ಸಾಕ್ಷ್ಯಾಧಾರ­ಗಳು ಲಭ್ಯವಾಗಿಲ್ಲವೋ ಅಂಥವರ ಹೆಸರುಗಳ ಪಟ್ಟಿಯನ್ನು ಕೇಂದ್ರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಈ ಹೆಸರುಗಳನ್ನು ಬಹಿರಂಗ ಮಾಡದಂತೆ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಅವರ ನೇತೃತ್ವದ ಪೀಠಕ್ಕೆ ಮನವಿ ಮಾಡಿದೆ.

ಎಚ್‌.ಎಲ್‌.ದತ್ತು ಅವರೊಂದಿಗೆ ರಂಜನಾ ಪ್ರಕಾಶ್‌ ದೇಸಾಯಿ ಮತ್ತು ಮದನ್‌ ಬಿ. ಲೋಕೂರ್‌ ಅವರನ್ನು ಒಳಗೊಂಡಿರುವ ಈ ನ್ಯಾಯಪೀಠವು, ಈ ದಾಖಲೆಗಳ ಕುರಿತು ಮೊದಲು ತಮ್ಮತಮ್ಮೊಳಗೆ ಚರ್ಚಿಸಿದ ನಂತರ ಮೇ 1ರಂದು ನಿರ್ಧಾರ ತೆಗೆದುಕೊಳ್ಳು­ವುದಾಗಿ ಸ್ಪಷ್ಟಪಡಿಸಿದೆ.

ಎಲ್‌ಜಿಟಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರ ಹೆಸರನ್ನು ಬಹಿರಂಗ­ಗೊಳಿಸುವಂತೆ ಸುಪ್ರೀಂಕೋರ್ಟ್‌ 2011ರಲ್ಲಿ ತೀರ್ಪು ನೀಡಿತ್ತು. ಆದರೂ ಕೇಂದ್ರ ಸರ್ಕಾರ ಅದನ್ನು ಪಾಲಿಸಿರಲಿಲ್ಲ. ಹೀಗಾಗಿ ಸರ್ಕಾರದ ಮೇಲೆ ಸುಪ್ರೀಂಕೋರ್ಟ್‌ ಚಾಟಿ ಬೀಸಿತ್ತು.

ಎಲ್‌ಜಿಟಿಯಲ್ಲಿ ಖಾತೆ ಹೊಂದಿರುವ 12 ಟ್ರಸ್‌್ಟಗಳಿಗೆ ಸೇರಿರುವವರಲ್ಲಿ ಭಾರತ ಮೂಲದ 26 ಜನ ಇದ್ದಾರೆ. 26 ಪ್ರಕರಣಗಳ ಪೈಕಿ 18 ಪ್ರಕರಣಗಳ ತನಿಖೆಯನ್ನು ಆದಾಯ ತೆರಿಗೆ ಇಲಾಖೆ ಮುಗಿಸಿದೆ. 17 ಪ್ರಕರಣಗಳ ಸಂಬಂಧ ವಿಚಾರಣಾ ಪ್ರಕ್ರಿಯೆಯೂ ಆರಂಭ­ವಾಗಿದೆ ಎಂದು ಕೇಂದ್ರ ಸರ್ಕಾರವು ಪ್ರಮಾಣಪತ್ರದಲ್ಲಿ ತಿಳಿಸಿದೆ.

ವಿಶ್ವಾಸಾರ್ಹ ವರದಿಗಳ ಪ್ರಕಾರ ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪುಹಣದ ಮೊತ್ತ 19 ಲಕ್ಷ ಕೋಟಿ ರೂಪಾಯಿಗಳಷ್ಟು ದಾಟುತ್ತದೆ ಎಂಬುದು ಜೇಠ್ಮಲಾನಿ ಅವರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.