ADVERTISEMENT

ಕೋರ್ಟ್‌ಗೆ ಹಾಜರು; ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 10:52 IST
Last Updated 20 ನವೆಂಬರ್ 2014, 10:52 IST

ಚಂಡೀಗಡ (ಪಿಟಿಐ): ವಿಚಾರಣೆಯಿಂದ ಸದಾ ನುಣುಚಿಕೊಳ್ಳುತ್ತಿದ್ದ ಸ್ವಯಂ ಘೋಷಿತ ‘ದೇವಮಾನವ’ ರಾಮ್‌ಪಾಲ್‌ ಅವರನ್ನು ಬಂಧಿಸಿದ ಒಂದು ದಿನದ ಬಳಿಕ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಗುರುವಾರ ಹಾಜರು ಪಡಿಸಲಾಯಿತು. ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತು.

ವ್ಯಾಪಕ ಬಿಗಿಭದ್ರತೆಯಲ್ಲಿ ರಾಮ್‌ಪಾಲ್ ಅವರನ್ನು ನ್ಯಾಯಮೂರ್ತಿಗಳಾದ  ಎಂ.ಜಯಪಾಲ್‌ ಮತ್ತು ದರ್ಶನ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠ ಎದುರು ಹರಿಯಾಣ ಪೊಲೀಸರು ಹಾಜರು ಪಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಹರಿಯಾಣದ ಹಿಸ್ಸಾರ್‌ ಜಿಲ್ಲೆಯ ಬರ್‌ವಾಲಾದಲ್ಲಿರುವ ಆಶ್ರಮದಲ್ಲಿ ರಾಮ್‌ಪಾಲ್‌ ಅವರ ಬಂಧನಕ್ಕಾಗಿ ನಡೆಸಿದ ಕಾರ್ಯಚರಣೆಯ ವಿವರಗಳು, ಈ ವೇಳೆ ಗಾಯಗೊಂಡ ಜನರು, ಆಶ್ರಮದಲ್ಲಿದ್ದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳು ಮತ್ತು ಆಸ್ತಿಹಾನಿಯ ಬಗೆಗಿನ ವಿವರಗಳನ್ನೊಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ಹರಿಯಾಣ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತು. ಬಳಿಕ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿತು.

ADVERTISEMENT

2006ರ ಕೊಲೆ ಪ್ರಕರಣ ಸಂಬಂಧ ವಿಚಾರಣೆಯಿಂದ ನುಣುಚಿಕೊಳ್ಳುತ್ತಿದ್ದ ರಾಮ್‌ಪಾಲ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ನೀಡಿದ್ದ ಗಡುವು ಮುಗಿದರೂ ರಾಮ್‌ಪಾಲ್‌ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ರಾಮ್‌ಪಾಲ್‌ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಹೈಕೋರ್ಟ್‌ ಹರಿಯಾಣ ಪೊಲೀಸರಿಗೆ ಸೂಚನೆ ನೀಡಿತ್ತು. ಎರಡು ವಾರಗಳ ಕಾರ್ಯಾಚರಣೆ ನಡೆಸಿದ ಪೊಲೀಸರು ಬುಧವಾರ ರಾತ್ರಿ ಸತ್‌ಲೋಕ್‌ ಆಶ್ರಮದಲ್ಲಿ ರಾಮ್‌ಪಾಲ್‌ ಅವರನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.