ADVERTISEMENT

ಕ್ಯಾಂಪಸ್‌ ಕಲಹಕ್ಕೆ ರಾಜಕೀಯ ಬಣ್ಣ

ಪಿಟಿಐ
Published 28 ಫೆಬ್ರುವರಿ 2017, 4:28 IST
Last Updated 28 ಫೆಬ್ರುವರಿ 2017, 4:28 IST
ಕ್ಯಾಂಪಸ್‌ ಕಲಹಕ್ಕೆ ರಾಜಕೀಯ ಬಣ್ಣ
ಕ್ಯಾಂಪಸ್‌ ಕಲಹಕ್ಕೆ ರಾಜಕೀಯ ಬಣ್ಣ   

ನವದೆಹಲಿ: ಎಬಿವಿಪಿ ಕಾರ್ಯಕರ್ತರು ಎನ್ನಲಾದವರಿಂದ ತಮಗೆ ಅತ್ಯಾಚಾರದ ಬೆದರಿಕೆಗಳು ಬಂದಿವೆ ಎಂದು ಹುತಾತ್ಮ ಯೋಧ ಮನ್‌ದೀಪ್‌ ಸಿಂಗ್ ಪುತ್ರಿ ಗುರ್‌ಮೆಹರ್ ಕೌರ್ ದೆಹಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅವರಿಗೆ  ಪೊಲೀಸ್‌ ಭದ್ರತೆ ನೀಡಲು ತೀರ್ಮಾನಿಸಲಾಗಿದೆ.

ಶ್ರೀರಾಮ ಮಹಿಳಾ ಕಾಲೇಜಿನ ವಿದ್ಯಾರ್ಥಿ ಗುರ್‌ಮೆಹರ್ ಅವರು, ರಾಮ್‌ಜಾಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ‘ನಾನು ಎಬಿವಿಪಿಗೆ ಹೆದರುವುದಿಲ್ಲ’ ಎಂಬ ಅಭಿಯಾನ ಆರಂಭಿಸಿದ್ದರು. ಇದಕ್ಕೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಬೆಂಬಲ ವ್ಯಕ್ತವಾಗಿತ್ತು.

‘ರಾಮ್‌ಜಾಸ್ ಕಾಲೇಜಿನ ಘಟನೆ ಗಮನಿಸಿ, ರಾಷ್ಟ್ರೀಯತೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರ ಖಂಡಿಸುವೆ ಎಂದು ಹೇಳಿದೆ. ಇದಾದ ನಂತರ ನನಗೆ ಸಾಮಾಜಿಕ ಜಾಲತಾಣಗಳ ಮೂಲಕ ಅತ್ಯಾಚಾರದ ಬೆದರಿಕೆ ಬಂದಿದೆ’ ಎಂದು ಗುರ್‌ಮೆಹರ್‌ ದೂರಿನಲ್ಲಿ ಹೇಳಿದ್ದಾರೆ.

ರಾಮಜಾಸ್ ಕಾಲೇಜಿನ ಘಟನೆ ಉಲ್ಲೇಖಿಸಿ, ‘ಮುಗ್ಧ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ನಡೆಸಿದ ಹಲ್ಲೆ ಮನಸ್ಸು ಕಲಕುವಂಥದ್ದು’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಈ ಬರಹವನ್ನು ಅವರ ಸಹಪಾಠಿಗಳು, ಸ್ನೇಹಿತರು ಫೇಸ್‌ಬುಕ್‌ ಮೂಲಕ ಹಂಚಿಕೊಂಡರು. ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಂದಲೂ ಬೆಂಬಲ ವ್ಯಕ್ತವಾಗಿತ್ತು. ‘ನನ್ನನ್ನು ರಾಷ್ಟ್ರವಿರೋಧಿ ಎನ್ನುವವರಿಗೆ ರಾಷ್ಟ್ರೀಯತೆ ಎಂದರೆ ಏನೆಂಬುದೇ ತಿಳಿದಿಲ್ಲ’ ಎಂದು ಗುರ್‌ಮೆಹರ್‌ ಹೇಳಿದರು.

ದೂರು ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಗುರ್‌ಮೆಹರ್, ‘ರಾಜಕೀಯ ಅಥವಾ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿಚಾರ ಇದಲ್ಲ. ನಮ್ಮ ಕಾಲೇಜು ಆವರಣಗಳು ಬೆದರಿಕೆಗಳಿಂದ ಮುಕ್ತವಾಗಿರಬೇಕು’ ಎಂದರು.

ಮನಸ್ಸು ಕಲುಷಿತ ಮಾಡುತ್ತಿರುವವರು ಯಾರು?: ರಿಜಿಜು ಪ್ರಶ್ನೆ
ಗುರ್‌ಮೆಹರ್‌ ಕೌರ್‌ ಅವರ ಮನಸ್ಸನ್ನು ಕಲುಷಿತಗೊಳಿಸುತ್ತಿರುವವರು ಯಾರು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಪ್ರಶ್ನಿಸಿದ್ದಾರೆ.
ಗುರ್‌ಮೆಹರ್‌ ಅವರು ಎಬಿವಿಪಿ ವಿರುದ್ಧ ನಡೆಸುತ್ತಿರುವ ಅಭಿಯಾನಕ್ಕೆ ರಿಜಿಜು ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಸಶಕ್ತ ಸೇನೆಯು ಯುದ್ಧವನ್ನು ತಡೆಯುತ್ತದೆ. ಭಾರತವು ಬೇರೆಯವರ ಮೇಲೆ ದಾಳಿ ನಡೆಸುವುದಿಲ್ಲ. ಆದರೆ, ಭಾರತ ದುರ್ಬಲವಾಗಿದ್ದಾಗಲೆಲ್ಲ ಬೇರೆಯವರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ’ ಎಂದು ರಿಜಿಜು ಬರೆದಿದ್ದಾರೆ.

ರಿಜಿಜು ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಮಹಿಳೆ ಯೊಬ್ಬಳು ಸ್ವತಂತ್ರವಾಗಿ ಯೋಚಿಸಲು ಆರಂಭಿಸಿದಾಗ, ಪಿತೃಪ್ರಧಾನ ಮನಸ್ಥಿತಿಯ ಬಿಜೆಪಿ ಆಕೆಯ ಮನಸ್ಸು ಕಲುಷಿತವಾಗಿ ಎನ್ನುತ್ತದೆ. ವ್ಯಕ್ತಿಯೊಬ್ಬ ಶಾಂತಿಯ ಪರ ಮಾತನಾಡಿದರೆ, ಬಿಜೆಪಿ ದ್ವೇಷದ ಪರ ನಿಲ್ಲುತ್ತದೆ’ ಎಂದು ಹೇಳಿದೆ.

ಎಫ್‌ಐಆರ್‌ ದಾಖಲಿಸಲು ಆಯೋಗ ಮನವಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಅವರು ಗುರ್‌ಮೆಹರ್ ಕೌಲ್‌ ನೀಡಿರುವ ದೂರು ಆಧರಿಸಿ, ‘ಆರೋಪಿಗಳ ವಿರುದ್ಧ ತಕ್ಷಣ ಎಫ್‌ಐಆರ್‌ ದಾಖಲಿಸಬೇಕು, ಯುವತಿಗೆ ಭದ್ರತೆ ಒದಗಿಸಬೇಕು’ ಎಂದು ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಗುರ್‌ಮೆಹರ್ ಅವರು ತಮಗೆ ಬೆದರಿಕೆ ಒಡ್ಡಿರುವವರ ವಿವರ ಹಾಗೂ ಅದಕ್ಕೆ ಪೂರಕ ಸಾಕ್ಷ್ಯಗಳನ್ನು ನಿಡಿದ್ದಾರೆ. ಇದನ್ನು ಆಧರಿಸಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ನಾವು ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದೇವೆ’ ಎಂದು ಮಾಲೀವಾಲ್ ತಿಳಿಸಿದರು.

ದೆಹಲಿ ವಿಶ್ವವಿದ್ಯಾಲಯದ ಉತ್ತರ ಆವರಣದಲ್ಲಿ ಸೋಮವಾರ ತಿರಂಗಾ ನಡಿಗೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ‘ಕಾಲೇಜು ಆವರಣದಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಲು ವೇದಿಕೆ ಕಲ್ಪಿಸುವ ಯಾವುದೇ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ’ ಎಂದು ಶಪಥ ಮಾಡಿದರು.

‘ರಾಷ್ಟ್ರವಿರೋಧಿಗಳ ಬೆರಳುಗಳನ್ನು ನಾವು ಕತ್ತರಿಸಿಹಾಕುತ್ತೇವೆ’ ಎಂದು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ, ಎಬಿವಿಪಿ ಕಾರ್ಯಕರ್ತ ಅಂಕಿತ್ ಸಂಗ್ವಾನ್ ಹೇಳಿದರು.

‘ದೆಹಲಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ತಕರ್ತರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಸದಸ್ಯರು ಜೆಎನ್‌ಯು ಆವರಣದಲ್ಲಿ ಸಭೆ ನಡೆಸಿದರು.

ಯೂಟ್ಯೂಬ್ ಮೂಲಕ ಸಂದೇಶ
ಗುರ್‌ಮೆಹರ್‌ ಕೌರ್‌ ಅವರು ಯುಟ್ಯೂಬ್‌ನಲ್ಲಿ (https://goo.gl/T6Q2zI) ದೃಶ್ಯಾವಳಿಯೊಂದನ್ನು ಹಾಕಿದ್ದಾರೆ. ಅದರ ಮೂಲಕ ಅವರು ರವಾನಿಸಿರುವ ಸಂದೇಶದ ಆಯ್ದ ಭಾಗ ಇಲ್ಲಿದೆ:

ನನ್ನ ತಂದೆ ಕ್ಯಾಪ್ಟನ್ ಮನ್‌ದೀಪ್‌ ಸಿಂಗ್‌ 1999ರ ಕಾರ್ಗಿಲ್‌ ಯುದ್ಧದಲ್ಲಿ ಸಾವನ್ನಪ್ಪಿದರು. ಅವರು ಮೃತಪಟ್ಟಾಗ ನನಗೆ ಎರಡು ವರ್ಷ ವಯಸ್ಸು.
ಪಾಕಿಸ್ತಾನ ಮತ್ತು ಪಾಕಿಸ್ತಾನದ ಜನ ನನ್ನ ತಂದೆಯನ್ನು ಕೊಂದರು ಎಂಬ ಕಾರಣಕ್ಕೆ ಅವರನ್ನು ದ್ವೇಷಿಸುತ್ತಿದ್ದೆ. ಮುಸ್ಲಿಮರೆಲ್ಲರೂ ಪಾಕಿಸ್ತಾನಿಗಳು ಎಂದು ಭಾವಿಸಿ, ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳಿಗೆ ಚೂರಿ ಹಾಕಲು ಈ ಹಿಂದೆ ಯತ್ನಿಸಿದ್ದೆ. ಆಕೆ ನನ್ನ ತಂದೆಯ ಸಾವಿಗೆ ಕಾರಣ ಎಂದು ಏಕೋ ಅನಿಸಿತ್ತು. ಆದರೆ ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನ ಅಲ್ಲ, ಯುದ್ಧ ಎಂಬುದನ್ನು ನನ್ನ ತಾಯಿ ನನಗೆ ಅರ್ಥ ಮಾಡಿಸಿದರು.

ನಾನು ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪಿಸಲು ಹೋರಾಡುತ್ತೇನೆ. ನಮ್ಮಿಬ್ಬರ ನಡುವೆ ಯುದ್ಧ ಇಲ್ಲದಿರುತ್ತಿದ್ದರೆ ನನ್ನ ತಂದೆ ಈಗಲೂ ಬದುಕಿರುತ್ತಿದ್ದರು. ಎರಡೂ ದೇಶಗಳ ಸರ್ಕಾರಗಳು ಸೋಗು ಹಾಕುವುದನ್ನು ನಿಲ್ಲಿಸಿ, ಸಮಸ್ಯೆ ಬಗೆಹರಿಸಲಿ ಎಂಬ ಉದ್ದೇಶದಿಂದ ಈ ದೃಶ್ಯಾವಳಿ ಸಿದ್ಧಪಡಿಸಿದ್ದೇನೆ. ಸಾಮಾನ್ಯ ಪಾಕಿಸ್ತಾನಿ ಹಾಗೂ ಭಾರತೀಯರಲ್ಲಿ ಬಹುತೇಕ ಜನ ಶಾಂತಿ ಬಯಸುತ್ತಾರೆಯೇ ವಿನಾ ಯುದ್ಧವನ್ನಲ್ಲ.

ಎಐಎಸ್‌ಎ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ
ರಾಮ್‌ಜಾಸ್‌ ಕಾಲೇಜಿನಲ್ಲಿ ನಡೆದ ಘರ್ಷಣೆಯ ವೇಳೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಐಎಸ್‌ಎನ (ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ) ಇಬ್ಬರು ಕಾರ್ಯಕರ್ತರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತೆಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಶ್ರೀರಾಮ ವಾಣಿಜ್ಯ ಕಾಲೇಜು ಹೊರಗೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು ಎಂದು ಇವರು ದೂರಿನಲ್ಲಿ ಹೇಳಿದ್ದಾರೆ. ಎಐಎಸ್‌ಎ ಸಂಘಟನೆಯ ದೆಹಲಿ ವಿಶ್ವವಿದ್ಯಾಲಯದ ಕಾರ್ಯದರ್ಶಿ ಅಮನ್ ನವಾಜ್, ‘ಇದು ಸುಳ್ಳು. ಎಬಿವಿಪಿ ಕಾರ್ಯಕರ್ತರು ನಮ್ಮವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

ವಿವಾದ ಸೃಷ್ಟಿಸಿದ ಪ್ರತಾಪ್ ಸಿಂಹ ಟ್ವೀಟ್
‘ನನ್ನ ತಂದೆಯನ್ನು ಕೊಲೆ ಮಾಡಿದ್ದು ಪಾಕಿಸ್ತಾನವಲ್ಲ, ಯುದ್ಧ’ ಎಂದು ಗುರ್‌ಮೆಹರ್‌ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ‘ರಾಷ್ಟ್ರವಿರೋಧಿ ನಿಲುವು ಸಮರ್ಥಿಸಿಕೊಳ್ಳಲು ದಾವೂದ್‌ ಕೂಡ ತನ್ನ ತಂದೆ ಹೆಸರನ್ನು ಬಳಸಿಕೊಂಡಿರಲಿಲ್ಲ’ ಎಂಬ ಸಂದೇಶವಿರುವ ಚಿತ್ರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಾಪ್‌ ಹಂಚಿಕೊಂಡಿರುವ ಚಿತ್ರದಲ್ಲಿ, ದಾವೂದ್‌ ಭಾವಚಿತ್ರದ ಕೆಳಗೆ, ‘1993ರಲ್ಲಿ ಜನರನ್ನು ನಾನು ಕೊಲ್ಲಲಿಲ್ಲ. ಬಾಂಬುಗಳು ಜನರನ್ನು ಕೊಂದವು’ ಎಂಬ ಮಾತು ಇದೆ. ಇದು ಗುರ್‌ಮೆಹರ್‌ ಅವರನ್ನು ಅಣಕಿಸುವಂತಿದೆ ಎಂಬ ಮಾತುಕೇಳಿಬಂದಿದೆ.

ತಮ್ಮ ಟ್ವೀಟ್‌ ವಿವಾದಕ್ಕೆ ಕಾರಣವಾದ ನಂತರ ಸ್ಪಷ್ಟನೆ ನೀಡಿದ ಪ್ರತಾಪ್, ‘ಹೋಲಿಕೆ ಹಾಗೂ ರೂಪಕಗಳ ನಡುವಣ ವ್ಯತ್ಯಾಸ ಮಾಧ್ಯಮಗಳಿಗೆ ತಿಳಿದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಗುರ್‌ಮೆಹರ್‌ ಸಂದೇಶಕ್ಕೆ ಪ್ರತಿಯಾಗಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ‘ಎರಡು ಬಾರಿ ತ್ರಿಶತಕ ಬಾರಿಸಿದ್ದು ನಾನಲ್ಲ, ನನ್ನ ಬ್ಯಾಟ್‌’ ಎಂದು ಅಣಕಿಸುವ ಸಂದೇಶ ಟ್ವಿಟರ್‌ ಮೂಲಕ ಹರಿಬಿಟ್ಟರು.

* ಮುಗ್ಧ ಹುಡುಗಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ತಪ್ಪು.
ರಣದೀಪ್ ಹೂಡಾ
ಬಾಲಿವುಡ್ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.