ADVERTISEMENT

ಖಾಸಗಿತನ ಪರಿಪೂರ್ಣ ಹಕ್ಕಲ್ಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಖಾಸಗಿತನ ಪರಿಪೂರ್ಣ ಹಕ್ಕಲ್ಲ
ಖಾಸಗಿತನ ಪರಿಪೂರ್ಣ ಹಕ್ಕಲ್ಲ   

ನವದೆಹಲಿ: ಖಾಸಗಿತನದ ಹಕ್ಕು ಪರಿಪೂರ್ಣ ಅಲ್ಲ, ಈ ಹಕ್ಕಿನ ಮೇಲೆ ಸರ್ಕಾರ ನ್ಯಾಯಯುತ ನಿರ್ಬಂಧ ಹೇರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ಹೇಳಿದೆ.

ಖಾಸಗಿತನ ಮೂಲಭೂತ ಹಕ್ಕೇ ಎಂಬ ಐತಿಹಾಸಿಕ ವಿಚಾರಣೆಯನ್ನು ಪೀಠ ಆರಂಭಿಸಿತು.

ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿದರೆ ಈ ಹಕ್ಕಿನ ಎಲ್ಲೆಗಳು ಯಾವುವು ಮತ್ತು ಅದರ ಮೇಲೆ ಹೇರಬಹುದಾದ ನ್ಯಾಯಯುತ ನಿರ್ಬಂಧಗಳು ಯಾವುವು ಎಂಬುದನ್ನು ತಿಳಿಯಲು ಪೀಠವು ಬಯಸಿತು.

ADVERTISEMENT

‘ಖಾಸಗಿತನದ ಹಕ್ಕಿನ ಮೇಲೆ ಹೇರಬಹುದಾದ ನ್ಯಾಯಯುತ ನಿರ್ಬಂಧಗಳ ಮಾನದಂಡ ಏನು ಎಂಬುದನ್ನು ನಿರ್ಧರಿಸುವ ಮೊದಲು ಖಾಸಗಿತನ ಏನು ಎಂಬುದನ್ನು ವ್ಯಾಖ್ಯಾನಿಸಬೇಕು. ಖಾಸಗಿತನದ ಎಲ್ಲೆಗಳು ಯಾವುವು... ಇವು ಸರ್ಕಾರ ನೀತಿ ರೂಪಿಸುವುದನ್ನು ತಡೆಯುವಷ್ಟು ವಿಸ್ತೃತವಾಗಿವೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಪೀಠ ಪ್ರಶ್ನಿಸಿತು.

ಮಾಹಿತಿಯ ರಕ್ಷಣೆಯನ್ನು ಶಾಸನಬದ್ಧವಾಗಿ ಖಾತರಿಪಡಿಸಬಹುದು. ಆದರೆ ಜನರು ಬ್ಯಾಂಕುಗಳಿಗೆ ಸಲ್ಲಿಸಿದ ಮಾಹಿತಿ ಖಾಸಗಿತನದ ವ್ಯಾಪ್ತಿಯಲ್ಲಿ ಬರಲಿಕ್ಕಿಲ್ಲ ಎಂದು ಪೀಠ ಹೇಳಿತು.

ಸಂವಿಧಾನವು ನೀಡಿರುವ ಸಮಾನತೆ, ವಾಕ್‌ ಸ್ವಾತಂತ್ರ್ಯ, ಜೀವಿಸುವ ಹಕ್ಕುಗಳನ್ನು ಕಾನೂನು ಮೂಲಕ ಜಾರಿಗೊಳಿಸುವುದಕ್ಕೆ ಸಾಧ್ಯ. ಆದರೆ ಇವುಗಳ ಮೇಲೆ ನ್ಯಾಯಬದ್ಧವಾದ ನಿರ್ಬಂಧ ಹೇರುವುದಕ್ಕೆ ಅವಕಾಶ ಇದೆ. ಹಾಗಾಗಿ ಈ ಯಾವ ಹಕ್ಕುಗಳೂ ಪರಿಪೂರ್ಣ ಅಲ್ಲ ಎಂದು ವಿವರಿಸಿತು.

ಆಧಾರ್‌ ನೋಂದಣಿಗಾಗಿ ದೇಹಕ್ಕೆ ಸಂಬಂಧಿಸಿದ ಮಾಹಿತಿಗಳನ್ನೂ ನೀಡಬೇಕಾಗುತ್ತದೆ. ಇದು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿಯ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

ಎಲ್ಲ ದೇಶಗಳಲ್ಲಿಯೂ ಸಂವಿಧಾನ ಅಥವಾ ಶಾಸನದ ಮೂಲಕ  ಖಾಸಗಿತನದ ಹಕ್ಕು ರಕ್ಷಿಸಲಾಗಿದೆ ಎಂದು ವಕೀಲರಾದ ಗೋಪಾಲ ಸುಬ್ರಮಣ್ಯಂ, ಸೋಲಿ ಸೊರಾಬ್ಜಿ, ಶ್ಯಾಮ್‌ ದಿವಾನ್‌, ಅರವಿಂದ ದಾತಾರ್‌ ವಾದಿಸಿದರು.

ಖಾಸಗಿತನದ ಹಕ್ಕನ್ನು ಅಪರಿಮಿತ ಎಂದು ಪರಿಗಣಿಸಿದರೆ ಅದು ಭಾರಿ ಅಪಾಯಕ್ಕೆ ಕಾರಣವಾದೀತು ಎಂದು ಪೀಠ ಅಭಿಪ್ರಾಯಪಟ್ಟಿತು. ವಿಚಾರಣೆ ಗುರುವಾರವೂ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.