ADVERTISEMENT

ಖಾಸಗಿತನ ಮೂಲಭೂತ ಹಕ್ಕಾದರೂ ಪರಿಪೂರ್ಣವಲ್ಲ

‘ಸುಪ್ರೀಂ’ ಮುಂದೆ ಕೇಂದ್ರದ ಹೇಳಿಕೆ

ಪಿಟಿಐ
Published 26 ಜುಲೈ 2017, 20:36 IST
Last Updated 26 ಜುಲೈ 2017, 20:36 IST
ಖಾಸಗಿತನ ಮೂಲಭೂತ ಹಕ್ಕಾದರೂ ಪರಿಪೂರ್ಣವಲ್ಲ
ಖಾಸಗಿತನ ಮೂಲಭೂತ ಹಕ್ಕಾದರೂ ಪರಿಪೂರ್ಣವಲ್ಲ   

ನವದೆಹಲಿ: ಸಂವಿಧಾನ ಪ್ರಕಾರ, ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬಹುದು. ಆದರೆ ಖಾಸಗಿತನಕ್ಕೆ ಸಂಬಂಧಿಸಿದ ಹಲವು ಅಂಶಗಳು ಮೂಲಭೂತ ಹಕ್ಕಿನ ಅಡಿಯಲ್ಲಿ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ.

ಖಾಸಗಿತನ ಮೂಲಭೂತ ಹಕ್ಕು ಹೌದೇ ಎಂಬ ವಿವಾದಾತ್ಮಕ ವಿಚಾರದ ವಿಚಾರಣೆಗಾಗಿ ಒಂಬತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠವನ್ನು ರಚಿಸಲಾಗಿದೆ. 1950 ಮತ್ತು 1962ರಲ್ಲಿ ಸುಪ್ರೀಂ ಕೋರ್ಟ್‌ ಈ ಬಗ್ಗೆ ತೀರ್ಪು ನೀಡಿ ಖಾಸಗಿತನ ಮೂಲಭೂತ ಹಕ್ಕು ಅಲ್ಲ ಎಂದು ಹೇಳಿದ್ದನ್ನು ಕೇಂದ್ರ ಸರ್ಕಾರ ಉಲ್ಲೇಖಿಸಿತ್ತು. ಆ ಬಳಿಕ ವಿಸ್ತೃತ ಪೀಠ ರಚಿಸಲಾಗಿತ್ತು.

‘ಖಾಸಗಿತನದ ಕೆಲವು ಅಂಶಗಳನ್ನು ಮೂಲಭೂತ ಎಂದು ಪರಿಗಣಿಸಬಹುದು. ಆದರೆ ಅದರ ಹಲವು ಅಂಶಗಳು ಸ್ವಾತಂತ್ರ್ಯದ ಹಕ್ಕಿನ ಉಪಭಾಗಗಳು. ಹಾಗಾಗಿ ಖಾಸಗಿತನದ ಎಲ್ಲ ಅಂಶಗಳನ್ನು ಮೂಲಭೂತ ಹಕ್ಕಿನ ಅಡಿಯಲ್ಲಿ ಸೇರಿಸುವುದಕ್ಕೆ ಸಾಧ್ಯವಿಲ್ಲ’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದಿಸಿದರು.

‘ಖಾಸಗಿತನದ ಹಕ್ಕು ಎಂಬುದು ಏಕರೂಪದ ಹಕ್ಕಲ್ಲ. ಈ ಹಕ್ಕು ಪರಿಪೂರ್ಣವೂ ಅಲ್ಲ. ಆದರೆ ಖಾಸಗಿತನದ ಹಕ್ಕಿನ ಕೆಲವು ಅಂಶಗಳನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಪೀಠಕ್ಕೆ  ತಿಳಿಸಿದರು.

ಕೇಂದ್ರದ ವಿರುದ್ಧ ನಿಲುವು
ಕರ್ನಾಟಕ ಸೇರಿ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ನಾಲ್ಕು ರಾಜ್ಯಗಳು ಖಾಸಗಿತನಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ವಿರುದ್ಧವಾದ ನಿಲುವು ತಳೆದಿದ್ದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಖಾಸಗಿನ ಕಾನೂನುಬದ್ಧ ಹಕ್ಕು, ಆದರೆ ಮೂಲಭೂತ ಹಕ್ಕು ಅಲ್ಲ ಎಂದು  ಖಾಸಗಿತನ ಬಗ್ಗೆ ವಿಚಾರಣೆ ನಡೆಸುತ್ತಿರುವ ಒಂಬತ್ತು ನ್ಯಾಯಮೂರ್ತಿಗಳ ಪೀಠಕ್ಕೆ ಕೇಂದ್ರ ತಿಳಿಸಿದೆ. ಆದರೆ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು ಎಂದು ಈ ನಾಲ್ಕು ರಾಜ್ಯಗಳು ಹೇಳಿವೆ.

ಕರ್ನಾಟಕದ ಜತೆ ಅರ್ಜಿ ಸಲ್ಲಿಸಿರುವ ಇತರ ರಾಜ್ಯಗಳೆಂದರೆ ಕಾಂಗ್ರೆಸ್ ಆಡಳಿತ ಇರುವ ಪಂಜಾಬ್‌, ಪುದುಚೇರಿ ಮತ್ತು ತೃಣಮೂಲ ಕಾಂಗ್ರೆಸ್‌ ಆಡಳಿತ ಇರುವ ಪಶ್ಚಿಮ ಬಂಗಾಳ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT