ADVERTISEMENT

ಖಾಸಗಿಯವರಿಗೆ ಅವಕಾಶ ಇಲ್ಲ: ‘ಸುಪ್ರೀಂ’ ಸ್ಪಷ್ಟನೆ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಮೇ 2016, 19:30 IST
Last Updated 5 ಮೇ 2016, 19:30 IST
ಖಾಸಗಿಯವರಿಗೆ ಅವಕಾಶ ಇಲ್ಲ: ‘ಸುಪ್ರೀಂ’ ಸ್ಪಷ್ಟನೆ
ಖಾಸಗಿಯವರಿಗೆ ಅವಕಾಶ ಇಲ್ಲ: ‘ಸುಪ್ರೀಂ’ ಸ್ಪಷ್ಟನೆ   

ನವದೆಹಲಿ: ವೈದ್ಯಕೀಯ (ಎಂಬಿಬಿಎಸ್‌) ಮತ್ತು ದಂತ ವೈದ್ಯಕೀಯ (ಬಿಡಿಎಸ್‌) ಕೋರ್ಸ್‌ಗಳ ಪ್ರವೇಶಕ್ಕಾಗಿ ಖಾಸಗಿ ಕಾಲೇಜುಗಳು ಅಥವಾ ಒಕ್ಕೂಟಗಳು ತಮ್ಮದೇ  ಆದ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಅರ್ಹತಾ ಮತ್ತು  ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವುದನ್ನು ವಿರೋಧಿಸಿ ವಿವಿಧ ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಅನಿಲ್‌ ಆರ್‌. ದವೆ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ, ‘ಖಾಸಗಿ ಕಾಲೇಜುಗಳು ಪರೀಕ್ಷೆ ನಡೆಸಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಸುಪ್ರೀಂಕೋರ್ಟ್‌ ಖಂಡತುಂಡವಾಗಿ ಹೇಳಿತು.

ಆದರೆ, ಆಯಾ ರಾಜ್ಯ ಸರ್ಕಾರಗಳು ತಮ್ಮದೇ ಆದ ಸಾಮಾನ್ಯ ಪ್ರವೇಶ ಪರೀಕ್ಷೆ   (ಸಿಇಟಿ) ನಡೆಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

‘ಸದ್ಯಕ್ಕೆ ರಾಜ್ಯ ಸರ್ಕಾರಗಳು ಹೊಂದಿರುವ ಅಧಿಕಾರಕ್ಕೆ ನಾವು ತಡೆ ನೀಡಿಲ್ಲ’ ಎಂದು ನ್ಯಾಯಪೀಠ ತಿಳಿಸಿತು.

ಸೂಚನೆ: ಮೇ 1ರಂದು ನಡೆದ ಮೊದಲ ಎನ್‌ಇಇಟಿ ಬರೆದ ಅಭ್ಯರ್ಥಿಗಳು ಜುಲೈ 24ರಂದು ನಡೆಯಲಿರುವ ಎರಡನೇ ಎನ್‌ಇಇಟಿಗೆ ಹಾಜರಾಗಬಹುದೇ ಎಂಬುದನ್ನು ಶುಕ್ರವಾರ ತಿಳಿಸುವಂತೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರ ವಾದಿಸುತ್ತಿರುವ  ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌ ಅವರಿಗೆ ನ್ಯಾಯಾಲಯ ಸೂಚಿಸಿತು.

ಒಂದು ವೇಳೆ, 2ನೇ ಎನ್‌ಇಇಟಿಗೆ ಹಾಜರಾಗಲು ಎಲ್ಲರಿಗೆ ಅವಕಾಶ ನೀಡಿದರೆ, ಅಂದಾಜು 30 ಲಕ್ಷ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲು ಸಿಬಿಎಸ್‌ಇಗೆ ಸಾಧ್ಯವಿದೆಯೇ ಎಂದೂ ನ್ಯಾಯಪೀಠ ಪ್ರಶ್ನಿಸಿತು.

2ನೇ ಎನ್‌ಇಇಟಿಯಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಭಾರತೀಯ ವೈದ್ಯಕೀಯ ಮಂಡಳಿಗೂ ನ್ಯಾಯಪೀಠ ಸೂಚಿಸಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್‌ ರಂಜಿತ್‌ ಕುಮಾರ್‌, ‘ಶೇ 15ರಷ್ಟು ಅಖಿಲ ಭಾರತ ಕೋಟಾ ಸೀಟುಗಳಿಗಾಗಿ ನಡೆಸಲಾಗುತ್ತಿದ್ದ ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಯನ್ನೇ (ಎಐಪಿಎಂಟಿ) ಎನ್‌ಇಇಟಿ–1 ಎಂದು ಪರಿಗಣಿಸಲಾಗಿತ್ತು. ಆ ಪರೀಕ್ಷೆಗೆ ಅರ್ಜಿ  ಹಾಕಿ ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಎನ್‌ಇಇಟಿ–2 ಅನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

‘ಪ್ರತಿಯೊಬ್ಬರಿಗೂ ಎರಡನೇ ಎನ್‌ಇಇಟಿಗೆ ಹಾಜರಾಗಲು ಅವಕಾಶ ನೀಡುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಲಾಗುವುದು’ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.

ನಿರ್ದೇಶನ: ಈ ಮಧ್ಯೆ, ವಿಶೇಷ ಕಾನೂನುಗಳನ್ನು ಹೊಂದಿರುವ ರಾಜ್ಯಗಳಿಗೆ ಈ ವರ್ಷದ ಮಟ್ಟಿಗೆ ತಮ್ಮದೇ ಆದ ಸಿಇಟಿ ನಡೆಸಲು ಅವಕಾಶ ನೀಡುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು.

ಸಂವಿಧಾನದ ಅಡಿಯಲ್ಲಿ ತಮಗೆ ನೀಡಲಾಗಿರುವ ವಿಶೇಷ ಸ್ಥಾನಮಾನಗಳನ್ನು ಉಲ್ಲೇಖಿಸಿದ್ದ  ಜಮ್ಮು ಮತ್ತು ಕಾಶ್ಮೀರ ಹಾಗೂ ಆಂಧ್ರಪ್ರದೇಶ ರಾಜ್ಯಗಳು, ತಮ್ಮದೇ ಆದ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದು  ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.