ADVERTISEMENT

ಗಾಂಗ್ಲೆ ವಿರುದ್ಧ ಮಹಾಭಿಯೋಗಕ್ಕೆ 50 ಸಂಸದರ ಸಹಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 9:53 IST
Last Updated 6 ಮಾರ್ಚ್ 2015, 9:53 IST

ನವದೆಹಲಿ: ಮಹಿಳಾ ಕಾನೂನು ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌.ಕೆ.ಗಾಂಗ್ಲೆ ಅವರ ವಿರುದ್ಧ ಮಹಾಭಿಯೋಗ ಕ್ರಮ ಜರುಗಿಸಲು ರಾಜ್ಯಸಭೆಯ 50ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದಾರೆ.

ಜೆಡಿ(ಯು) ಅಧ್ಯಕ್ಷ ಶರದ್‌ ಯಾದವ್‌ ಅವರ ನಾಯಕತ್ವದಲ್ಲಿ ಈ ಕ್ರಮಕ್ಕೆ ಮುಂದಾಗಿದ್ದು, ಕಾಂಗ್ರೆಸ್‌, ಸಿಪಿಎಂ, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ ಹಾಗೂ ಬಿಎಸ್‌ಪಿಯ ಸಂಸದರು ಬೆಂಬಲ ನೀಡಿದ್ದಾರೆ.

ಗಾಂಗ್ಲೆ ಅವರ ವಿರುದ್ಧ ಮಹಾಭಿಯೋಗ ಕ್ರಮ ಕೈಗೊಳ್ಳುವಂತೆ ಯಾದವ್‌ ಸೇರಿದಂತೆ ಸೀತಾರಾಮ್‌ ಯಚೂರಿ, ದಿಗ್ವಿಜಯ್‌ ಸಿಂಗ್‌, ಜಯಾ ಬಚ್ಚನ್‌, ಅನು ಅಘಾ ಹಾಗೂ ಪಿ.ರಾಜೀವ್‌ ಅವರು ಸಹಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಾನೂನಿನ ಪ್ರಕಾರ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟಿನ ನ್ಯಾಯಾಧೀಶರ ವಿರುದ್ಧ ಮಹಾಭಿಯೋಗ ಕ್ರಮ ಜರುಗಿಸಲು ಕನಿಷ್ಠ 50 ಸಂಸದರು ನೋಟಿಸ್‌ ನೀಡಬೇಕಾಗಿದೆ.

ಗಾಂಗ್ಲೆ ವಿರುದ್ಧ ದೂರು ದಾಖಲಿಸಿದ್ದ ಮಹಿಳಾ ಅಧಿಕಾರಿಯು 2014ರ ಜುಲೈ15ರಂದು ರಾಜೀನಾಮೆ ನೀಡಿದ ನಂತರ ಅವರನ್ನು ದೂರದ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ನಂತರ ಮಹಿಳಾ ಅಧಿಕಾರಿಯು ಗಾಂಗ್ಲೆ ವಿರುದ್ಧ ರಾಷ್ಟ್ರಪತಿ, ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.