ADVERTISEMENT

ಗುಂಡಿನ ಕಾಳಗ: ಮೂವರು ಯೋಧರ ಸಾವು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 10:54 IST
Last Updated 27 ನವೆಂಬರ್ 2014, 10:54 IST

ಜಮ್ಮು(ಪಿಟಿಐ): ಜಮ್ಮುವಿನ ರಜೋರಿ ಜಿಲ್ಲೆಯ ಅಂತರ ರಾಷ್ಟ್ರೀಯ ಗಡಿಯಲ್ಲಿ ಯೋಧರು ಮತ್ತು ಉಗ್ರರ ಮಧ್ಯೆ ಗುರುವಾರ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಮೂವರು ಯೋಧರು ಮೃತಪಟ್ಟಿದ್ದು, ಮೂವರು ನಾಗರಿಕರು ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭೆ ಎರಡನೇ ಹಂತದ ಚುನಾವಣೆಯ ಪ್ರಚಾರ ಕಾರ್ಯಕ್ರಮವನ್ನು ಬಿಜೆಪಿ ನ. 28ರಂದು ಇಲ್ಲಿನ ಪೂಂಚ್ ಜಿಲ್ಲೆಯಲ್ಲಿ ಆಯೋಜಿಸಿದ್ದು, ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಇದರ ಬೆನ್ನಲ್ಲೇ ಉಗ್ರರ ದಾಳಿ ನಡೆದಿರುವುದು ಆತಂಕಕ್ಕೀಡು ಮಾಡಿದೆ.

ಉಗ್ರರು ಗುರುವಾರ ಬೆಳಿಗ್ಗೆ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿ ಸೇನೆಯ ಅಡಗುತಾಣಗಳನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಸೇನೆ ಮತ್ತು ಉಗ್ರರ ಮಧ್ಯೆ ಪರಸ್ಪರ ಗುಂಡಿನ ದಾಳಿ ನಡೆದಿದೆ. ಪೊಲೀಸರು ಮತ್ತು ಭಾರತೀಯ ಗಡಿ ಭದ್ರತಾ ಪಡೆಯ ಸಿಬ್ಬಂದಿ ಜಂಟಿಯಾಗಿ ಹೋರಾಟ ನಡೆಸಿದ್ದು, ಈ ವೇಳೆ ಮೂವರು ಯೋಧರು ಮೃತಪಟ್ಟಿದ್ದು, ಮೂರು ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಕಾಳಗದ ವೇಳೆ ಉಗ್ರರ ಬಳಿ ಇದ್ದ ಪಾಕಿಸ್ತಾನ ನಿರ್ಮಿತ 30 ಸುತ್ತು ಗುಂಡುಗಳನ್ನು ಒಳಗೊಂಡ ಎಕೆ -47 ಮಷಿನ್ ಗನ್ ಹಾಗೂ ಪಾಕಿಸ್ತಾನದ 8,100 ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.