ADVERTISEMENT

ಗುಜರಾತ್‌ ಚುನಾವಣೆ: 70 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ಪಿಟಿಐ
Published 17 ನವೆಂಬರ್ 2017, 19:00 IST
Last Updated 17 ನವೆಂಬರ್ 2017, 19:00 IST
ಗುಜರಾತ್‌ ಚುನಾವಣೆ: 70 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ
ಗುಜರಾತ್‌ ಚುನಾವಣೆ: 70 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ   

ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಗೆ 70 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹಿರಿಯ ರಾಜಕಾರಣಿಗಳು ಮತ್ತು ಪಟೇಲ್‌ ಸಮುದಾಯಕ್ಕೆ ಸೇರಿದ ಆಕಾಂಕ್ಷಿಗಳಿಗೆ ಮಣೆ ಹಾಕಲಾಗಿದೆ. 49 ಶಾಸಕರಿಗೆ ಮರು ಆಯ್ಕೆಗೆ ಅವಕಾಶ ಒದಗಿಸಲಾಗಿದೆ. ಪಟೇಲ್‌ ಸಮುದಾಯಕ್ಕೆ ಸೇರಿದ 16 ಅಭ್ಯರ್ಥಿಗಳಿದ್ದಾರೆ.

ಮುಖ್ಯಮಂತ್ರಿ ವಿಜಯ ರೂಪಾಣಿ ಅವರು ರಾಜಕೋಟ್‌ ಪಶ್ಚಿಮ ಕ್ಷೇತ್ರದಿಂದ, ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರು ಮೆಹ್ಸಾನಾದಿಂದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಜೀತೂ ವಘಾನಿ ಅವರು ಭಾವನಗರ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ನಲ್ಲಿ ಶಾಸಕರಾಗಿ ಗೆದ್ದು ಬಳಿಕ ಬಿಜೆಪಿ ಸೇರಿದ ರಾಘವ್‌ಜಿ ಪಟೇಲ್‌, ಧರ್ಮೇಂದ್ರ ಜಡೇಜಾ, ಸಿ.ಕೆ. ರಾವುಲ್‌ಜಿ, ಮಾನ್‌ಸಿಂಹ ಚೌಹಾಣ್‌ ಮತ್ತು ರಾಮಸಿಂಹ ಪರ್ಮಾರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ADVERTISEMENT

70 ಅಭ್ಯರ್ಥಿಗಳ ಪೈಕಿ 58 ಮಂದಿ ಡಿಸೆಂಬರ್‌ 9ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ದಿಲೀಪ್‌ ಸಂಘಾನಿ ಅವರನ್ನು ಲಾಥಿ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹಿಂದೆ ಅಮ್ರೇಲಿಯಲ್ಲಿ ಸ್ಪರ್ಧಿಸಿದ್ದ ಸಂಘಾನಿ ಅವರು ಕಾಂಗ್ರೆಸ್‌ನ ಪರೇಶ್‌ ಧನಾನಿ ಅವರ ಎದುರು ಸೋತಿದ್ದರು. ಧನಾನಿ ಅವರು ಪಟೇಲ್‌ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಂಗ್ರೆಸ್‌ ರಾಜ್ಯ ಘಟಕದ ಸಹ ಅಧ್ಯಕ್ಷರಾಗಿದ್ದಾರೆ.

ಹಾರ್ದಿಕ್‌ಗೆ ತಿರುಗೇಟು: ಶಾಸಕರಲ್ಲಿ ಹಲವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಗಳು ಪ್ರಕಟವಾಗಿದ್ದವು. ಆದರೆ ಮೊದಲ ಹಂತದ ಪಟ್ಟಿಯಲ್ಲಿ ವರ್ಷಾಬೆನ್‌ ಜೋಷಿ ಅವರನ್ನು ಮಾತ್ರ ಕೈಬಿಡಲಾಗಿದೆ. ಅವರ ಕ್ಷೇತ್ರಕ್ಕೆ ಧಾನ್‌ಜಿಭಾಯ್‌ ಪಟೇಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಧಾನ್‌ಜಿಭಾಯ್‌ ಅವರು ಹಾರ್ದಿಕ್‌ ಪಟೇಲ್‌ ಅವರದ್ದೇ ಉಪ ಜಾತಿಗೆ ಸೇರಿದವರು.

ಹಾರ್ದಿಕ್‌ ಅವರ ಬೆಂಬಲ ನೆಲೆಗೆ ಹೊಡೆತ ನೀಡುವುದೇ ಈ ಕ್ರಮದ ಉದ್ದೇಶ ಎಂದು ಹೇಳಲಾಗಿದೆ. ಪಟೇಲ್‌ ಸಮುದಾಯದ ಮೀಸಲು  ಹೋರಾಟದಿಂದ ಬಿಜೆಪಿಗೆ ಆಗಿರುವ ಹಾನಿಯನ್ನು ಸರಿಪಡಿಸುವುದೇ ಪಟೇಲ್‌ ಸಮುದಾಯದ ಹೆಚ್ಚಿನ ಆಕಾಂಕ್ಷಿಗಳಿಗೆ ಟಿಕೆಟ್‌ ನೀಡಲು ಕಾರಣ ಎನ್ನಲಾಗಿದೆ.

**

ಟಿಕೆಟ್‌ ಲೆಕ್ಕಾಚಾರ

ನಾಲ್ವರು ಮಹಿಳೆಯರಿಗೆ ಸ್ಥಾನ

ಕಾಂಗ್ರೆಸ್‌ನಿಂದ ಬಂದ 14 ಶಾಸಕರ ಪೈಕಿ ಐವರಿಗೆ ಟಿಕೆಟ್‌

ಜಾತಿವಾರು ಟಿಕೆಟ್‌: ಕೋಲಿ–15, ಬುಡಕಟ್ಟು 11, ಠಾಕೂರ್‌–8, ಕ್ಷತ್ರಿಯ–6, ಬ್ರಾಹ್ಮಣ–3, ಜೈನ–2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.