ADVERTISEMENT

ಗುಜರಾತ್‌ ವಿಧಾನಸಭಾ ಚುನಾವಣೆ: 80 ಅಭ್ಯರ್ಥಿಗಳ ಕಾಂಗ್ರೆಸ್‌ ಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಗುಜರಾತ್‌ ವಿಧಾನಸಭಾ ಚುನಾವಣೆ: 80 ಅಭ್ಯರ್ಥಿಗಳ ಕಾಂಗ್ರೆಸ್‌ ಪಟ್ಟಿ ಸಿದ್ಧ
ಗುಜರಾತ್‌ ವಿಧಾನಸಭಾ ಚುನಾವಣೆ: 80 ಅಭ್ಯರ್ಥಿಗಳ ಕಾಂಗ್ರೆಸ್‌ ಪಟ್ಟಿ ಸಿದ್ಧ   

ನವದೆಹಲಿ: ಗುಜರಾತ್‌ ವಿಧಾನಸಭಾ ಚುನಾವಣೆಗೆ 80 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಅಂತಿಮಗೊಳಿಸಿದೆ. ಆದರೆ, ಪಟೇಲ್‌ ಸಮುದಾಯದ ಮುಖಂಡರ ಜತೆಗಿನ ಚುನಾವಣಾ ಪೂರ್ವ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿದ ಬಳಿಕ ಮುಂದಿನ ವಾರ ಪಟ್ಟಿ ಬಿಡುಗಡೆಯಾಗಲಿದೆ.

ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಹೆಸರುಗಳನ್ನು ಅಂತಿಮ ಮಾಡಲಾಗಿದೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲದಂತೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುಜರಾತಿನ ಯುವ ಮುಖಂಡರಾದ ಅಲ್ಪೇಶ್‌ ಠಾಕೂರ್‌, ಹಾರ್ದಿಕ್‌ ಪಟೇಲ್‌ ಮತ್ತು ಜಿಗ್ನೇಶ್‌ ಮೆವಾನಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊ
ಳ್ಳಲು ಕಾಂಗ್ರೆಸ್‌ ಪ್ರಯತ್ನ ನಡೆಸುತ್ತಿದೆ. ಹಿಂದುಳಿದ ವರ್ಗದ ಮುಖಂಡ ಅಲ್ಪೇಶ್‌ ಅವರು ಕಾಂಗ್ರೆಸ್‌ ಸೇರಿದ್ದು ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಪಟೇಲ್‌ ಸಮುದಾಯದ ಹಾರ್ದಿಕ್‌ ಮತ್ತು ದಲಿತ ಸಮುದಾಯದ ಮೆವಾನಿ ಅವರ ಮೂಲಕ ಇಡೀ ಸಮುದಾಯದ ಮತ ಪಡೆಯುವ ಬಗ್ಗೆ ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸುತ್ತಿದೆ.

ADVERTISEMENT

ಇದೇ 16ರಂದು 70 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿಂಹ ಸೋಲಂಕಿ ಹೇಳಿದ್ದಾರೆ. ಒಬ್ಬರೇ ಆಕಾಂಕ್ಷಿ ಇರುವ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ. ಚುನಾವಣಾ ಸಮಿತಿಯ ಇನ್ನೊಂದು ಸಭೆ ಗುರುವಾರ ನಡೆಯಲಿದ್ದು, ಅಲ್ಲಿ ಇನ್ನಷ್ಟು ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಪಟ್ಟಿಗೆ ರಾಹುಲ್‌ ಅನುಮೋದನೆಯೂ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.