ADVERTISEMENT

ಗುರ್ಮೀತ್ ಆಶ್ರಮದಲ್ಲಿ 600 ಅಸ್ಥಿಪಂಜರ ಪತ್ತೆ!

ಎಸ್‌ಐಟಿ ಅಧಿಕಾರಿಗಳಿಗೆ ಸೌದಾದ ಕಾರ್ಯಕರ್ತ ನೀಡಿದ ಮಾಹಿತಿ

ಪಿಟಿಐ
Published 20 ಸೆಪ್ಟೆಂಬರ್ 2017, 19:53 IST
Last Updated 20 ಸೆಪ್ಟೆಂಬರ್ 2017, 19:53 IST
ಪಂಚಕುಲಾದಲ್ಲಿ ಆಗಸ್ಟ್ 25ರಂದು ನಡೆದಿದ್ದ ಗಲಭೆಯಲ್ಲಿ ಬೆಂಕಿಗೆ ಆಹುತಿಯಾಗಿದ್ದ ವಾಹನಗಳು. –ಪಿಟಿಐ ಚಿತ್ರ
ಪಂಚಕುಲಾದಲ್ಲಿ ಆಗಸ್ಟ್ 25ರಂದು ನಡೆದಿದ್ದ ಗಲಭೆಯಲ್ಲಿ ಬೆಂಕಿಗೆ ಆಹುತಿಯಾಗಿದ್ದ ವಾಹನಗಳು. –ಪಿಟಿಐ ಚಿತ್ರ   

ಚಂಡೀಗಡ: ಡೇರಾ ಸಚ್ಚಾ ಸೌದಾದ ಮುಖ್ಯ ಕೇಂದ್ರದಲ್ಲಿ ಸುಮಾರು 600 ಮಾನವ ಅಸ್ಥಿಪಂಜರಗಳನ್ನು ಹೂಳಲಾಗಿದೆ. ಡೇರಾದ ಹಿರಿಯ ಕಾರ್ಯಕರ್ತ ಡಾ.ಪಿ.ಆರ್. ನೈನ್ ಹರಿಯಾಣದ ವಿಶೇಷ ತನಿಖಾಧಿಕಾರಿಗಳ ತಂಡಕ್ಕೆ (ಎಸ್‌ಐಟಿ) ಈ ವಿಷಯ ತಿಳಿಸಿದ್ದಾನೆ.

ಮಾನವನ ಅಸ್ಥಿಪಂಜರ ಹೂಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಲಿದೆ ಎನ್ನುವ ವರದಿಯೊಂದನ್ನು ಗುರ್ಮೀತ್ ನಂಬಿದ್ದ ಮತ್ತು ಸಮರ್ಥಿಸಿಕೊಳ್ಳುತ್ತಿದ್ದ. ಇದನ್ನು ವಿರೋಧಿಸುತ್ತಿದ್ದ ಅನುಯಾಯಿಗಳನ್ನು ಗುರ್ಮೀತ್ ಕೇಂದ್ರದಿಂದ ಹೊರಹಾಕುತ್ತಿದ್ದ ಎನ್ನುವ ವಿಷಯವನ್ನು ನೈನ್ ತಿಳಿಸಿದ್ದಾನೆ.

ಅಸ್ಥಿಪಂಜರ ಹೂಳಿರುವುದಕ್ಕೆ ಸಂಬಂಧಿಸಿ ಕೆಲವು ದಾಖಲೆಗಳನ್ನು ಸಹ ಆತ ನೀಡಿದ್ದಾನೆ. ಈ ಎಲ್ಲಾ ದಾಖಲೆಗಳನ್ನು ಇನ್ನಷ್ಟೆ ಸಂಪೂರ್ಣವಾಗಿ ಪರಿಶೀಲಿಸಬೇಕಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈಚೆಗಷ್ಟೆ ಡೇರಾದ ಮುಖ್ಯ ಕೇಂದ್ರದಲ್ಲಿ ಮೂರು ದಿನ ಶೋಧ ಕಾರ್ಯ ನಡೆಸಲಾಗಿತ್ತು. ಜೆಸಿಬಿ ಯಂತ್ರಗಳನ್ನು ಸಹ ತರಿಸಲಾಗಿತ್ತು. ಆದರೆ ಕೇಂದ್ರದ ಆವರಣ ಅಗೆಯುವ ಕಾರ್ಯವನ್ನು ಅಧಿಕಾರಿಗಳು ಮುಂದೂಡಿದ್ದರು. ಡೇರಾದ ಹಿರಿಯ ಉಪಾಧ್ಯಕ್ಷನೂ ಆಗಿದ್ದ ಈತನನ್ನು ಎರಡೂವರೆ ತಾಸು ವಿಚಾರಣೆಗೆ ಒಳಪಡಿಸಲಾಯಿತು.

ಪಂಚಕುಲಾ ಹಾಗೂ ಸಿರ್ಸಾದಲ್ಲಿ ನಡೆದಿದ್ದ ಗಲಭೆಯಲ್ಲಿ ನೆರೆದಿದ್ದ ಜನರ ಕುರಿತು ಸಹ ಪ್ರಶ್ನಿಸಲಾಯಿತು ಎಂದು ಸಿರ್ಸಾ ಎಸ್‌ಐಟಿ ನೇತೃತ್ವ ವಹಿಸಿರುವ ಕುಲದೀಪ್ ಸಿಂಗ್ ಬೇನಿವಾಲ್ ತಿಳಿಸಿದ್ದಾರೆ.

ಪಂಚಕುಲಾ ಗಲಭೆ: 10 ಭಾವಚಿತ್ರ ಬಿಡುಗಡೆಗೊಳಿಸಿದ ಪೊಲೀಸರು
ಪಂಚಕುಲಾ ಗಲಭೆಗೆ ಸಂಬಂಧಿಸಿದ 10 ಭಾವಚಿತ್ರಗಳನ್ನು ಹರಿಯಾಣ ಪೊಲೀಸರು ಬುಧವಾರ ಬಿಡುಗಡೆಗೊಳಿಸಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡಿದ್ದವರ ಕುರಿತು ಮಾಹಿತಿ ನೀಡಿದರೆ ಅಂತಹವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಹಾಗೂ ಅವರ ಮಾಹಿತಿ ಗೋಪ್ಯವಾಗಿರಿಸಲಾಗುವುದು ಎಂದೂ ಹೇಳಿದ್ದಾರೆ.

ಡೇರಾ ಸಚ್ಚಾ ಸೌದಾ ಮುಖ್ಯಸ್ಥನಾಗಿದ್ದ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನನ್ನು ಆಗಸ್ಟ್‌ 25ರಂದು ಪೊಲೀಸರು ಬಂಧಿಸಿದ ಬಳಿಕ, ಪಂಚಕುಲಾ ಹಾಗೂ ಸಿರ್ಸಾದಲ್ಲಿ ಭಾರಿ ಗಲಭೆ ಸಂಭವಿಸಿತ್ತು. ಈ ವೇಳೆ ಪಂಚಕುಲಾದಲ್ಲಿ 35 ಮಂದಿ ಹಾಗೂ ಸಿರ್ಸಾದಲ್ಲಿ ಆರು ಮಂದಿ ಮೃತಪಟ್ಟಿದ್ದರು.

ಪ್ರತಿಭಟನಾಕಾರರು ಮಾಧ್ಯಮದ ವಾಹನಗಳು ಸೇರಿದಂತೆ ವಿವಿಧ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದು, ಕಲ್ಲು ತೂರಾಟ ನಡೆಸುತ್ತಿರುವುದು ಈ ಚಿತ್ರಗಳಲ್ಲಿ ಸೆರೆಯಾಗಿವೆ.

ಪ್ರಕರಣ ಸಂಬಂಧ ಬೇಕಾಗಿರುವ 43 ಜನರ ಪಟ್ಟಿಯನ್ನು ಪೊಲೀಸರು ಎರಡು ದಿನಗಳ ಹಿಂದಷ್ಟೆ ಬಿಡುಗಡೆ ಮಾಡಿದ್ದರು. ಗುರ್ಮೀತ್‌ ದತ್ತುಪುತ್ರಿ ಹನಿಪ್ರೀತ್ ಹೆಸರು ಈ ಪಟ್ಟಿಯಲ್ಲಿ ಪ್ರಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.