ADVERTISEMENT

ಗೋವಾ ಮುಖ್ಯಮಂತ್ರಿಯಾಗಿ ಪರಿಕ್ಕರ್; ಬಿಜೆಪಿಯ ಮುಂದಿನ ನಡೆ ಏನು?

ಪಿಟಿಐ
Published 13 ಮಾರ್ಚ್ 2017, 6:31 IST
Last Updated 13 ಮಾರ್ಚ್ 2017, 6:31 IST
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್   

ಪಣಜಿ: ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚಿಸಲು ಮುಂದಾಗಿದೆ. ಗೋವಾದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ ಪ್ರಾದೇಶಿಕ ಪಕ್ಷಗಳ ಕೈ ಹಿಡಿಯಲಿದ್ದು ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮನೋಹರ್‌ ಪರಿಕ್ಕರ್‌ ಅವರಿಗೆ ಸೂಚಿಸಿದ್ದಾರೆ.

ಶನಿವಾರ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ  ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದು ಗೋವಾದಲ್ಲಿ ಬಿಜೆಪಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಗೋವಾದಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲ
40 ಸದಸ್ಯರಿರುವ ಗೋವಾ ವಿಧಾನಸಭೆಯಲ್ಲಿ  ಬಿಜೆಪಿ 13 ಸ್ಥಾನಗಳಿಸಿದರೆ ಕಾಂಗ್ರೆಸ್ 17 ಸ್ಥಾನಗಳನ್ನು ಗಳಿಸಿದೆ. ಇನ್ನುಳಿದ 10 ಸ್ಥಾನಗಳನ್ನು ಸಣ್ಣ ಪುಟ್ಟ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಗಳಿಸಿದ್ದಾರೆ.
ಹೀಗಿರುವಾಗ ಸರ್ಕಾರ ರಚನೆಗಾಗಿ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ)ದ ತಲಾ ಮೂವರ ಶಾಸಕರ ಬೆಂಬಲ ನಮಗೆ ಸಿಗಲಿದೆ ಎಂದು ಬಿಜೆಪಿ ಹೇಳಿದೆ.
ಎನ್‍ಸಿಪಿ ಸದಸ್ಯ ಚರ್ಚಿಲ್ ಅಮೆಮನೋ ಅವರು ಕೂಡಾ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದು, ಬೆಂಬಲ ನೀಡುವ ಬಗ್ಗೆ ಅಧಿಕೃತ ಪತ್ರವನ್ನು ಇನ್ನೂ ಸಲ್ಲಿಸಿಲ್ಲ.
ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ನಿನ್ನೆ ಮನವಿ ಸಲ್ಲಿಸಿದ್ದರು.

ADVERTISEMENT

ಕೇಂದ್ರ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಪರಿಕ್ಕರ್ ನಿರ್ಧಾರ
‘ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ’ ಎಂದು ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಲು ಯಾವುದೇ ಸಮರ್ಥ ಶಾಸಕರು ಇಲ್ಲದೇ ಇರುವ ಕಾರಣ ನಾವು ಬಿಜೆಪಿಗೆ ಬೆಂಬಲ ನೀಡಲು ಬಯಸಿದ್ದೇವೆ. ಪರಿಕ್ಕರ್  ಅವರೇ ಮುಖ್ಯಮಂತ್ರಿಯಾಗಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ ಆ  ಸ್ಥಾನಕ್ಕೆ ಬೇರೆ ಯಾರೂ ಸೂಕ್ತರಲ್ಲ ಎಂದು ಎಂಜಿಪಿ ನೇತಾರ ಸುಧಿನ್ ಧವಲಿಕರ್ ಹೇಳಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಜತೆಗೆ ಇದ್ದೆವು. ಆದರೆ ಬಿಜೆಪಿ ಹೈಕಮಾಂಡ್ ಜತೆ ಸಮಾಲೋಚನೆ ಮಾಡಿದ ನಂತರ ಇಲ್ಲಿನ ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಇಚ್ಛೆ ವ್ಯಕ್ತಪಡಿಸಿತ್ತು. ಹಾಗಾಗಿ ನಾವು ಬಿಜೆಪಿಗೆ ಬೆಂಬಲ ನೀಡಲು ತೀರ್ಮಾನಿಸಿದೆವು ಎಂದು ಜಿಎಫ್‍ಪಿ ನೇತಾರ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.

[Related]

ಗೋವಾ ಸಿಎಂ ಆಗಿ ಪರಿಕ್ಕರ್
ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದ್ದರು. ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳ (ಎಂಜಿಪಿ) ತಲಾ ಮೂವರು ಶಾಸಕರ, ಇಬ್ಬರು ಪಕ್ಷೇತರ ಶಾಸಕರ, ಎನ್‌ಸಿಪಿಯ ಒಬ್ಬ ಶಾಸಕನ ಬೆಂಬಲ ಪತ್ರದೊಂದಿಗೆ ಪರಿಕ್ಕರ್ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಬಹುಮತ ಸಾಬೀತು ಪಡಿಸಲು ಕಾಲಾವಕಾಶ
ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮನೋಹರ್‌ ಪರಿಕ್ಕರ್‌ ಅವರಿಗೆ ಸೂಚಿಸಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ ಪರಿಕ್ಕರ್ ಅವರು ಮಂಗಳವಾರ ಅಥವಾ ಬುಧವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಜನಾದೇಶ ಉಲ್ಲಂಘನೆ: ಕಾಂಗ್ರೆಸ್ ಆರೋಪ
ಗೋವಾದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿದ್ದರೂ ಬಿಜೆಪಿ ಜನಾದೇಶವನ್ನು ಉಲ್ಲಂಘಿಸಿದೆ. ಗೋವಾ ರಾಜ್ಯ ರಾಜಕೀಯದಲ್ಲಿ ಪರಿಕ್ಕರ್ ಅವರು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.