ADVERTISEMENT

ಗ್ರಾಮಸ್ಥರ ಪ್ರತೀಕಾರ: ಯೋಧನಿಗೆ ನೇಣು

ತ್ರಿಪುರಾ ಘರ್ಷಣೆ: ಭದ್ರತಾ ಪಡೆ ಗುಂಡಿಗೆ ವ್ಯಕ್ತಿ ಬಲಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2014, 19:30 IST
Last Updated 7 ಜೂನ್ 2014, 19:30 IST

ಅಗರ್ತಲಾ (ಪಿಟಿಐ): ತ್ರಿಪುರಾದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮತ್ತು ಗ್ರಾಮಸ್ಥರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದು, ಕೋಪೋದ್ರಿಕ್ತ ಜನತೆ ಯೋಧನೊಬ್ಬನನ್ನು ನೇಣು ಹಾಕಿದ ಘಟನೆ ವರದಿಯಾಗಿದೆ.

ಬಾಂಗ್ಲಾದೇಶದ ಗಡಿಗೆ ಎರಡು ಕಿ.ಮೀ. ದೂರದಲ್ಲಿರುವ ದಕ್ಷಿಣ ರಾಮನಗರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಿಎಸ್‌ಎಫ್‌ ಯೋಧರು ಕಳ್ಳಸಾಗಣೆದಾರರ ಬೆನ್ನುಹತ್ತಿದ್ದರು. ಆಗ ಯೋಧರ ಮೇಲೆ ಲಾಠಿ ಮತ್ತು ಕೊಡಲಿಗಳಿಂದ ದಾಳಿ ಮಾಡಲಾಯಿತು.

ಯೋಧರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ, ದಾಳಿಕೋರರು ಹಿಮ್ಮೆಟ್ಟಲಿಲ್ಲ. ಆಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು. ಇದರಿಂದ ಗ್ರಾಮದ ನಿವಾಸಿ ಇಸ್ಮಾಯಿಲ್‌ ಮಿಯಾ ಎಂಬುವರು ಸಾವನ್ನಪ್ಪಿದರು. 10ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದಕ್ಕೆ ಪ್ರತೀಕಾರವಾಗಿ ಯೋಧ ಸಂದೀಪ್ ಕುಮಾರ ಅವರನ್ನು ಗ್ರಾಮಸ್ಥರು ನೇಣಿಗೇರಿಸಿದರು ಎಂದು ಬಿಎಸ್‌ಎಫ್‌ ಡಿಐಜಿ ಬಿ.ಎಸ್‌. ರಾವತ್‌ ಅವರು ಶನಿವಾರ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಮ್ಯಾಜಿಸ್ಟ್ರಿಯಲ್‌ ತನಿಖೆಗೆ ಆದೇಶಿಸಲಾಗಿದೆ ಎಂದು ಪಶ್ಚಿಮ ತ್ರಿಪುರಾ ಜಿಲ್ಲಾಧಿಕಾರಿ ಅಭಿಷೇಕ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.