ADVERTISEMENT

ಘಟಾನುಘಟಿ ಸೆಣಸು

ಕಣದಲ್ಲಿ ಮೋದಿ, ಸೋನಿಯಾ, ಅಡ್ವಾಣಿ, ಮಿಸ್ತ್ರಿ, ರಾಜನಾಥ್‌

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2014, 19:30 IST
Last Updated 29 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ದೇಶದ ಏಳು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 89 ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಲಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮುಖಂಡ­ರಾದ ಎಲ್‌.ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಹಲವು ಘಟಾನು­ಘಟಿಗಳ ಭವಿಷ್ಯ ನಿರ್ಧಾರ­ವಾಗಲಿದೆ.

ಚುನಾವಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, 13. 96 ಕೋಟಿ  ಜನ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.  ಇದು ಏಳನೇ ಹಂತದ ಚುನಾವಣೆ. 543 ಲೋಕಸಭಾ ಸ್ಥಾನಗಳ ಪೈಕಿ ಮೊದಲ ಆರು ಹಂತಗಳಲ್ಲಿ 349 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ.  ಇನ್ನುಳಿದ 105 ಕ್ಷೇತ್ರಗಳಿಗಾಗಿ ಮೇ 7ರಂದು ಎಂಟನೇ ಹಂತ ಮತ್ತು ಮೇ 12ರಂದು ಕೊನೆಯ ಹಾಗೂ ಒಂಬ­ತ್ತನೇ ಹಂತದ ಚುನಾವಣೆ ನಡೆಯಲಿದೆ.

ಆಂಧ್ರಪ್ರದೇಶದಲ್ಲಿ ಲೋಕಸಭೆ ಜತೆ  ವಿಧಾನಸಭೆ ಚುನಾವಣೆಯೂ ನಡೆಯ­ಲಿದ್ದು,  ತೆಲಂಗಾಣ ಭಾಗದ 119 ವಿಧಾನಸಭಾ ಕ್ಷೇತ್ರಗಳಲ್ಲಿ ಐತಿಹಾಸಿಕ ತೆಲಂಗಾಣ ರಾಜ್ಯಕ್ಕಾಗಿ ಮತದಾನ ನಡೆಯಲಿದೆ.

ಬಿಜೆಪಿ - ಕಾಂಗ್ರೆಸ್‌ ನಡುವೆ ಹಣಾಹಣಿ: ಬುಧವಾರ ನಡೆಯಲಿರುವ ಚುನಾ­ವಣೆ ಕೂಡ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ಹಣಾಹಣಿಗೆ ವೇದಿಕೆಯಾಗ­ಲಿದೆ. ಈಗ ಮತದಾನ ಎದುರಿಸುತ್ತಿರುವ 89 ಕ್ಷೇತ್ರಗಳ  ಪೈಕಿ ಕಳೆದ ಚುನಾವಣೆ­ಯಲ್ಲಿ ಬಿಜೆಪಿ 35 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್‌ 23 ಕ್ಷೇತ್ರಗಳನ್ನು ತನ್ನದಾಗಿಸಿ­ಕೊಂಡಿತ್ತು.

ಮೋದಿ, ಸೋನಿಯಾ, ಅಡ್ವಾಣಿ ಕಣದಲ್ಲಿ: ಲೋಕಸಭಾ  ಅಖಾಡಕ್ಕೆ ಮೊದಲ ಬಾರಿಗೆ ಇಳಿದಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾ ಕ್ಷೇತ್ರದಿಂದ ಕಣಕ್ಕಿಳಿದಿ­ದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ ಮುಖಂಡ ಮಧು­ಸೂದನ ಮಿಸ್ತ್ರಿ  ಸ್ಪರ್ಧಿಸುತ್ತಿದ್ದಾರೆ.
ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿ­ದ್ದಾರೆ. ಅಲ್ಲಿ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ನಿಂದ ಅಜಯ್‌ ರಾಯ್‌ ಸವಾಲೊಡ್ಡಿದ್ದಾರೆ. ವಾರಾಣಸಿಯಲ್ಲಿ ಕೊನೆಯ ಹಂತವಾದ ಮೇ 12ರಂದು ಮತದಾನ ನಡೆಯ­ಲಿದೆ.

ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ ಅಡ್ವಾಣಿ ಗಾಂಧಿನಗರದಿಂದ ಪುನರಾಯ್ಕೆ ಬಯಸಿದ್ದಾರೆ. ಗಾಂಧಿ ಕುಟುಂಬದ ಭದ್ರಕೋಟೆ ರಾಯ್‌ಬರೇಲಿ­ ಮತ್ತು ಲಖನೌ, ಕಾನ್ಪುರ ಸೇರಿದಂತೆ ಉತ್ತರ ಪ್ರದೇಶದ  14 ಕ್ಷೇತ್ರಗಳು ಮತದಾನಕ್ಕೆ ಸಜ್ಜಾಗಿವೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್‌ಬರೇಲಿಯಿಂದ ಪುನ­ರಾಯ್ಕೆ ಬಯಸಿದ್ದಾರೆ. ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಲಖನೌ, ಹಾಗೂ ಅದೇ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಕಾನ್ಪುರದಿಂದ ಸ್ಪರ್ಧಿಸುತ್ತಿದ್ದಾರೆ.

ರಾಜನಾಥ್‌ ಸಿಂಗ್‌ ವಿರುದ್ಧ ಉತ್ತರ ಪ್ರದೇಶ ಕಾಂಗ್ರೆಸ್‌ ಮುಖಸ್ಥೆ ರೀಟಾ ಬಹುಗುಣ ಜೋಶಿ ಕಣದಲ್ಲಿದ್ದಾರೆ. ಕಾನ್ಪುರದಲ್ಲಿ ಕೇಂದ್ರ ಸಚಿವ ಶ್ರೀಪ್ರಕಾಶ್‌ ಜೈಸ್ವಾಲ್‌ ಪೈಪೋಟಿ ನೀಡಲಿದ್ದಾರೆ.

ಜೇಟ್ಲಿ ಅದೃಷ್ಟ ಪರೀಕ್ಷೆ:
ಪಂಜಾಬ್‌ನ ಅಮೃತಸರದಲ್ಲಿ ಬಿಜೆಪಿ ಹಿರಿಯ ನಾಯಕ ಅರುಣ್‌ ಜೇಟ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದು ಅವರ ಮೊದಲ ಲೋಕಸಭಾ ಚುನಾವಣೆ. ಅವರ ವಿರುದ್ಧ ಪಂಜಾಬ್‌ ಮಾಜಿ ಮುಖ್ಯಮಂತ್ರಿ  ಅಮರಿಂದರ್‌ ಸಿಂಗ್‌ ಸ್ಪರ್ಧಿಸುತ್ತಿದ್ದಾರೆ.

ಪಂಜಾಬ್‌ನ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿ­ರುವ ಆಡಳಿತಾರೂಢ ಶಿರೋಮಣಿ ಅಕಾಲಿ ದಳ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಲಿದೆ.
ಇತ್ತ, ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮತ್ತು ಕಾಂಗ್ರೆಸ್‌ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.

ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಾ ಬಂದಿದ್ದ ಟಿಆರ್‌ಎಸ್‌ ಮತ್ತು ರಾಜ್ಯ ರಚನೆ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿ­ರುವ ಕಾಂಗ್ರೆಸ್‌, ಹೊಸ ರಾಜ್ಯ ಸ್ಥಾಪನೆಯ ಕೀರ್ತಿಯನ್ನು ಪಡೆಯಲು ಪೈಪೋಟಿ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.

ಸದ್ಯ ತೆಲಂಗಾಣ ಪ್ರಾಂತ್ಯದ ಎರಡು ಕ್ಷೇತ್ರಗಳನ್ನು ಟಿಆರ್‌ಎಸ್‌ ಪ್ರತಿ­ನಿಧಿ-­ಸು­ತ್ತಿದ್ದರೆ, ತೆಲುಗು ದೇಶಂ ಪಕ್ಷವೂ ಕೇವಲ ಇಬ್ಬರು ಸಂಸದರನ್ನು ಹೊಂದಿದೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರದಿಂದ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಪುನರಾಯ್ಕೆ ಬಯಸಿದ್ದಾರೆ.

ಬಿಹಾರದ ಮಾಧೇಪುರ ಕ್ಷೇತ್ರದಲ್ಲಿ ಜೆಡಿಯು ನಾಯಕ ಶರದ್‌ ಯಾದವ್‌ ಆರ್‌ಜೆಡಿಯ ಪಪ್ಪು ಯಾದವ್‌ ಅವರನ್ನು ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಪ್ಪಿ ಲಹರಿ, ಪತ್ರಕರ್ತ ಚಂದನ್‌ ಮಿತ್ರಾ ಕಣದಲ್ಲಿದ್ದಾರೆ.

ತೆಲಂಗಾಣಕ್ಕಾಗಿ ಮತದಾನ
ಹೈದರಾಬಾದ್‌ (ಪಿಟಿಐ):  ತೆಲಂಗಾಣದ 2.81 ಕೋಟಿ ಜನರಿಗೆ ಏಪ್ರಿಲ್‌್ 30 ಮಹತ್ವದ ದಿನ. ಜೂನ್‌್ 2ರಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿರುವ ನೂತನ ರಾಜ್ಯದ ಮೊದಲ ಸರ್ಕಾರವನ್ನು ಆರಿಸಲು ಅವರು ಹಕ್ಕು ಚಲಾಯಿಸಲಿದ್ದಾರೆ.

ಲೋಕಸಭೆಗೆ ಮಾತ್ರವಲ್ಲ, ವಿಧಾನಸಭೆಗೂ ಬುಧವಾರ ಇಲ್ಲಿ ಚುನಾವಣೆ ನಡೆಯಲಿದೆ.  ತೆಲಂಗಾಣದ ಮತದಾರರಲ್ಲಿ 1.37 ಕೋಟಿ ಮಹಿಳೆಯರು ಇದ್ದಾರೆ. 119 ವಿಧಾನ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1669 ಅಭ್ಯರ್ಥಿಗಳು, 17 ಲೋಕಸಭೆ ಕ್ಷೇತ್ರಗಳಲ್ಲಿ 265 ಮಂದಿ  ಅಖಾಡದಲ್ಲಿದ್ದಾರೆ.
ಪ್ರತ್ಯೇಕ ರಾಜ್ಯಕ್ಕಾಗಿ ಚಳವಳಿ ನಡೆಸಿದ    ಟಿಆರ್‌ಎಸ್‌ಗೆ ಇದು  ‘ಮಾಡು ಇಲ್ಲವೇ ಮಡಿ’ ಹೋರಾಟ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.