ADVERTISEMENT

ಚಿದಂಬರಂ ವಿರುದ್ಧ ಭಾರದ್ವಾಜ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಕಲಂ 66 (ಎ) ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌್ ತೀರ್ಮಾನ ಸ್ವಾಗತಿಸುವ ಮೂಲಕ ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ಬೂಟಾಟಿಕೆ ತೋರಿದ್ದಾರೆ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಎಚ್‌.ಆರ್‌.ಭಾರದ್ವಾಜ್‌್ ಹೇಳಿದ್ದಾರೆ. 

‘ಕಲಂ ರದ್ದು ಮಾಡಿರುವುದನ್ನು ಚಿದಂಬರಂ ಸಮರ್ಥಿಸಿಕೊಂಡಿದ್ದಾರೆ. ಈ ಕಾಯ್ದೆಗೆ ತಿದ್ದುಪಡಿ ಮಾಡಿದ್ದನ್ನು ಆಗ ಅವರೇ ಸಮರ್ಥಿಸಿಕೊಂಡಿದ್ದರು. ಇದು ಬೂಟಾಟಿಕೆ’ ಎಂದು ಭಾರದ್ವಾಜ್‌ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಭಾರದ್ವಾಜ್ ಅವರು ಕಾನೂನು ಸಚಿವರಾಗಿದ್ದ ವೇಳೆ 66ಎ ಕಲಂಗೆ ತಿದ್ದುಪಡಿ ಮಾಡಲಾಗಿತ್ತು. ‘ಚಿದಂಬರಂ ವಕೀಲರು. ಅವರಿಗೆ ಸುಪ್ರೀಂಕೋರ್ಟ್‌ ತೀರ್ಪು ಸರಿ ಇದೆಯೇ ಇಲ್ಲವೇ ಎಂಬುದು ತಿಳಿದಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಭಾರದ್ವಜ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಮಾಜಿ ಕಾನೂನು ಸಚಿವ ಸಲ್ಮಾನ್‌ ಖುರ್ಷಿದ್‌, ಭಾರದ್ವಾಜ್‌ ಅವರು ಹಿರಿಯ ಮುಖಂಡರು  ಹಾಗೂ ಮಾಜಿ ಸಚಿವರು. ರಾಜ್ಯಪಾಲರಾದ ನಂತರ ಅವರು ಕಾಂಗ್ರೆಸ್‌ ಮುಖಂಡರಾಗಿದ್ದಾರೆಯೇ ಇಲ್ಲವೇ ಎಂಬುದು ತಿಳಿದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.