ADVERTISEMENT

ಚೆನ್ನೈ–ಬೆಂಗಳೂರು–ಮೈಸೂರು ನಡುವೆ ಹೈಸ್ಪೀಡ್‌ ರೈಲು

ಪಿಟಿಐ
Published 28 ಜೂನ್ 2017, 19:45 IST
Last Updated 28 ಜೂನ್ 2017, 19:45 IST
ಚೆನ್ನೈ–ಬೆಂಗಳೂರು–ಮೈಸೂರು ನಡುವೆ ಹೈಸ್ಪೀಡ್‌ ರೈಲು
ಚೆನ್ನೈ–ಬೆಂಗಳೂರು–ಮೈಸೂರು ನಡುವೆ ಹೈಸ್ಪೀಡ್‌ ರೈಲು   

ನವದೆಹಲಿ: ಹೈಸ್‍ಪೀಡ್‌ ರೈಲು ಕ್ಷೇತ್ರದ ಪರಿಣತಿಗೆ ಹೆಸರಾಗಿರುವ ಜರ್ಮನಿಯ ತಜ್ಞರು ಚೆನ್ನೈ–ಬೆಂಗಳೂರು–ಮೈಸೂರು ನಡುವೆ ತಾಸಿಗೆ 300ರಿಂದ 450 ಕಿ.ಮೀ ವೇಗದಲ್ಲಿ ರೈಲು ಓಡಿಸುವ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.

ದಕ್ಷಿಣ ಭಾರತದಲ್ಲಿ ಹೈಸ್ಪೀಡ್‌ ರೈಲುಗಳ ಅಧ್ಯಯನ ನಡೆಸಲು ಜರ್ಮನಿ  ಸರ್ಕಾರವು ಅಲ್ಲಿನ ವಿವಿಧ ಸಂಸ್ಥೆಗಳ ಒಂದು ಕೂಟವನ್ನು ರಚಿಸಿದೆ. ಈ ಕೂಟವು ಒಂದು ವರ್ಷ ಅಧ್ಯಯನ ನಡೆಸಲಿದೆ.

ಹೈಸ್ಪೀಡ್‌ ರೈಲಿಗೆ ಮಾರ್ಗ ಗುರುತಿಸುವಿಕೆ, ಪ್ರಯಾಣಿಕರ ಸಂಖ್ಯೆ ಅಂದಾಜು, ಹೈಸ್ಪೀಡ್‌ ರೈಲು ಆರಂಭಿಸುವುದಕ್ಕೆ ಇರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಪರಿಣತರು ವರದಿ ಸಿದ್ಧಡಿಸಲಿದ್ದಾರೆ.

ADVERTISEMENT

ಪೂರ್ವಭಾವಿ ಅಧ್ಯಯನವೊಂದನ್ನು ಜರ್ಮನಿಯು 2016ರಲ್ಲಿಯೇ ಪೂರ್ಣಗೊಳಿಸಿದೆ. ಅದರ ಆಧಾರದಲ್ಲಿ ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಜರ್ಮನಿ ಉತ್ಸುಕವಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2015ರಲ್ಲಿ ಒಪ್ಪಂದ: ಭಾರತದಲ್ಲಿ ಹೈಸ್ಪೀಡ್‌ ರೈಲು ಯೋಜನೆಗೆ ಸಹಕಾರಕ್ಕೆ ಜರ್ಮನಿಯ ಸಾರಿಗೆ ಹಾಗೂ ಡಿಜಿಟಲ್‌ ಮೂಲಸೌಕರ್ಯ ಸಚಿವಾಲಯ ಮತ್ತು ಭಾರತೀಯ ರೈಲ್ವೆ ನಡುವೆ 2015ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಜರ್ಮನಿಯ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಈ  ಒಪ್ಪಂದ ಮಾಡಿಕೊಳ್ಳಲಾಗಿತ್ತು.

ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು 2016ರಲ್ಲಿ ಜರ್ಮನಿಗೆ ಭೇಟಿ ನೀಡಿದ್ದಾಗ ಮತ್ತೊಂದು ಒಪ್ಪಂದಕ್ಕೆ ಸಹಿ ಮಾಡಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಜರ್ಮನಿಯ ಸಾರಿಗೆ ಸಚಿವ ಅಲೆಕ್ಸಾಂಡರ್‌ ಡೊಬ್ರಿಂಟ್‌  ಭಾರತಕ್ಕೆ ಭೇಟಿ ನೀಡಿದ್ದಾಗಲೂ  ಹೈಸ್ಪೀಡ್‌ ರೈಲಿನ ಬಗ್ಗೆ ಚರ್ಚೆ ನಡೆಸಿದ್ದರು.

ಚೆನ್ನೈ–ಬೆಂಗಳೂರು–ಮೈಸೂರು ಹೈಸ್ಪೀಡ್‌ ರೈಲಿನ ಕಾರ್ಯಸಾಧ್ಯತೆ ಅಧ್ಯಯನವನ್ನು ತ್ವರಿತವಾಗಿ ಪೂರ್ಣಗೊಳಿಸಲು ಇಬ್ಬರು ಮುಖಂಡರು ನಿರ್ಧರಿಸಿದ್ದರು.

ಹೈಸ್ಪೀಡ್‌ ಸಮೀಕ್ಷೆ
* ಅಧ್ಯಯನ ಸಂಪೂರ್ಣ ವೆಚ್ಚವನ್ನು ಜರ್ಮನಿ ಭರಿಸಲಿದೆ
* ಬೆಂಗಳೂರು, ಚೆನ್ನೈಯಲ್ಲಿ ಕಾರ್ಯಾಗಾರ ನಡೆಸಿ ರೈಲ್ವೆ ಅಧಿಕಾರಿಗಳ ಜತೆ ವಿಚಾರ ವಿನಿಮಯ ನಡೆಸಲಾಗಿದೆ
* ಒಂದು ವರ್ಷದಲ್ಲಿ ಅಧ್ಯಯನ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.