ADVERTISEMENT

ಜಂಗ್ ಪ್ರಯತ್ನಗಳಿಗೆ ಸುಪ್ರೀಂ ಕೋರ್ಟ್ ತೃಪ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 11:06 IST
Last Updated 30 ಅಕ್ಟೋಬರ್ 2014, 11:06 IST

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ನಿರ್ಧರಿಸಿರುವ ಲೆಫ್ಟಿನೆಂಟ್ ಗವರ್ನರ್‌ ನಜೀಬ್‌ ಜಂಗ್ ಅವರ ನಡೆಗೆ ಸುಪ್ರೀಂ ಕೋರ್ಟ್‌ ಗುರುವಾರ ತೃಪ್ತಿ ವ್ಯಕ್ತಪಡಿಸಿದೆ.

ದೆಹಲಿ ವಿಧಾನಸಭೆಯನ್ನು ವಿಸರ್ಜಿಸುವಂತೆ ಕೋರಿ ಆಮ್‌ ಆದ್ಮಿ ಪಕ್ಷ (ಎಎಪಿ) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ  ಮುಖ್ಯ ನ್ಯಾಯಮೂರ್ತಿ ಎಚ್.ಎಲ್‌.ದತ್ತು ಅವರ ನೇತೃತ್ವದ ಐವರು ಸದ್ಯಸರ ಪೀಠ ನಡೆಸಿತು.

ಈ ವೇಳೆ, ‘ದಿನಪತ್ರಿಕೆಗಳಲ್ಲಿ ನಾನು ಓದಿದ ಪ್ರಕಾರ,  ಸರ್ಕಾರ ರಚನೆ ನಿಟ್ಟಿನಲ್ಲಿ ಲೆಫ್ಟಿನೆಂಟ್ ಗವರ್ನರ್‌ ಅವರು ಸಕಾರಾತ್ಮಕ ಹೆಜ್ಜೆ ಇಟ್ಟಿದ್ದಾರೆ’ ಎಂದು ಅಭಿಪ್ರಾಯ ಪಟ್ಟಿತು.

ADVERTISEMENT

ಅಲ್ಲದೇ, ಸರ್ಕಾರ ರಚನೆ ನಿಟ್ಟಿನಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಅವರು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ಆರಂಭಿಸಿದ್ದು,  ಸ್ವಲ್ಪ ಸಮಯ ಕಾಯುವಂತೆ ಎಎಪಿ ಪರ ಹಾಜರಾಗಿದ್ದ  ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿತು.

ಸಂಕ್ಷಿಪ್ತ ವಿಚಾರಣೆಯ ವೇಳೆ, ಸರ್ಕಾರ ರಚನೆಯಾಗುತ್ತೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಅನ್ನಿಸಿದರೇ ಅವರಿಗೆ ಇನ್ನಷ್ಟು ಸಮಯಾವಕಾಶ ನೀಡಲಾಗುವುದು ಎಂದು ಜೆ.ಚೆಲಮೇಶ್ವರ್, ಎ.ಕೆ.ಸಿಕ್ರಿ, ಆರ್‌.ಕೆ. ಅಗರ್ವಾಲ್ ಹಾಗೂ ಅರುಣ್‌ ಮಿಶ್ರಾ ಅವರನ್ನೂ ಒಳಗೊಂಡ ಪೀಠ ಹೇಳಿತು.

‘ರಾಜಕೀಯ ಪಕ್ಷಗಳ ಬಾಹ್ಯ ಬೆಂಬಲದಿಂದ ಅಲ್ಪಮತದ ಸರ್ಕಾರ ರಚನೆಯಾಗಬಹುದು’ ಎಂದು ದೆಹಲಿ ಸರ್ಕಾರ ರಚನೆಯ ಸಾಧ್ಯತೆಯ ಬಗ್ಗೆ ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

ಅದಾಗ್ಯೂ, ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಬಲವನ್ನು ಗಮನಿಸಿದರೆ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚನೆಯ ಯಾವುದೇ ಸಾಧ್ಯತೆಗಳಿಲ್ಲ ಎಂದು ಎಎಪಿ ಪರ ವಕೀಲ ಭೂಷಣ್ ವಾದಿಸಿದರು.

ಆದರೆ, ‘ನಾವು ಯಾವಾಗಲೂ ಭರವಸೆಯಲ್ಲಿ ಬದುಕಬೇಕು’ ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ, ಮುಂದಿನ ವಿಚಾರಣೆಯ ತನಕ ಕಾಯುವಂತೆ ಎಎಪಿಗೆ ಸೂಚಿಸಿತು.

ದೆಹಲಿಯಲ್ಲಿ ಸರ್ಕಾರ ರಚನೆಯ ಸಾಧ್ಯತೆಗಳ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಲು ಜಂಗ್ ಅವರು ಬುಧವಾರ ನಿರ್ಧರಿಸಿದ್ದರು.

ಪ್ರಜಾಪ್ರಭುತ್ವದಲ್ಲಿ ನಿರಂತರವಾಗಿ ರಾಷ್ಟ್ರಪತಿ ಆಡಳಿತ ನಡೆಸಲಾಗದು ಎಂದು ಕಟುವಾಗಿ ಹೇಳಿದ್ದ ನ್ಯಾಯಾಲಯ, ಸರ್ಕಾರ ರಚನೆ ನಿಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದ ಕೇಂದ್ರ ಹಾಗೂ ಲೆಫ್ಟಿನೆಂಟ್‌ ಗವರ್ನರ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.