ADVERTISEMENT

ಜತೆಯಾಗಿ ಸಾಗಲು ಬದ್ಧತೆ

ಜಾಗತಿಕ ಮುನ್ನಡೆಗೆ ದ್ವಿಪಕ್ಷೀಯ ನಂಟು: ಮೋದಿ, ಒಬಾಮ ಜಂಟಿ ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 20:04 IST
Last Updated 30 ಸೆಪ್ಟೆಂಬರ್ 2014, 20:04 IST

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಪ್ರಮುಖ ಪತ್ರಿಕೆ ‘ವಾಷಿಂಗ್ಟನ್‌ ಪೋಸ್ಟ್‌’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬರಾಕ್‌ ಒಬಾಮ ಅವರ ಐತಿಹಾಸಿಕ ಜಂಟಿ ಸಂಪಾದಕೀಯ ಪ್ರಕಟವಾದ ಮಂಗಳ­ವಾರದ ದಿನವೇ ಇಬ್ಬರೂ ನಾಯಕರು ಮಹತ್ವದ ಮಾತುಕತೆ ನಡೆಸಿದರು.

ರಕ್ಷಣೆ, ಭದ್ರತೆ, ವ್ಯಾಪಾರ, ಪಶ್ಚಿಮ ಏಷ್ಯಾ ಭಾಗದಲ್ಲಿ ಇಸ್ಲಾಮಿಕ್‌ ಉಗ್ರರು ಸೃಷ್ಟಿಸಿರುವ ಭಯೋತ್ಪಾದನಾ ಪರಿಸ್ಥಿತಿ ಸೇರಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ­ಗಳ ಬಗ್ಗೆ ಮೋದಿ ಮತ್ತು ಒಬಾಮ ಚರ್ಚೆ ನಡೆಸಿದರು.

ಅಮೆರಿಕ ಅಧ್ಯಕ್ಷರ ಅತಿಥಿ ಗೃಹ ಬ್ಲೇರ್‌ ಹೌಸ್‌ನಿಂದ ನೇರವಾಗಿ ಶ್ವೇತ ಭವನದ ಪ್ರಸಿದ್ಧ ‘ವೆಸ್ಟ್‌ ವಿಂಗ್‌’ಗೆ ಮೋದಿ ಬಂದರು. ಮೊದಲಿಗೆ ಇಬ್ಬರು ನಾಯಕರ ನಡುವೆ ಮಾತುಕತೆ ನಡೆದರೆ ನಂತರ ನಿಯೋಗ ಮಟ್ಟದ ಚರ್ಚೆ ನಡೆಯಿತು.

ಮೋದಿ ಅವರೊಂದಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಅಮೆರಿಕದಲ್ಲಿ ಭಾರತದ ರಾಯಭಾರಿ ಎಸ್‌. ಜೈಶಂಕರ್‌ ಮತ್ತು ವಿದೇಶಾಂಗ ಸಚಿವಾಲಯ ಮತ್ತು ಪ್ರಧಾನಿ ಸಚಿವಾಲಯದ ಹಿರಿಯ ಅಧಿಕಾರಿಗಳು ಇದ್ದರು. ಒಬಾಮ ಅವರ ಜತೆ ಉಪಾಧ್ಯಕ್ಷ ಜೋ ಬಿಡೆನ್‌, ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಸೂಸನ್‌ ರೈಸ್‌ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ವಿದೇಶಾಂಗ ಕಾರ್ಯದರ್ಶಿ ನಿಷಾ ದೇಸಾಯಿ ಬಿಸ್ವಾಲ್‌ ಇದ್ದರು.

ಮೋದಿ ಅವರು ನ್ಯೂಯಾರ್ಕ್‌­ನಿಂದ ವಾಷಿಂಗ್ಟನ್‌ಗೆ ಬಂದ ನಂತರ ಎರಡನೇ ಬಾರಿ ಉಭಯ ನಾಯಕರು ಭೇಟಿಯಾದರು. ಸೋಮ­ವಾರ ರಾತ್ರಿ ಮೋದಿ ಅವರಿಗಾಗಿ ಒಬಾಮ ಶ್ವೇತ ಭವನದಲ್ಲಿ ಔತಣ ಏರ್ಪಡಿಸಿದ್ದರು.

ಐತಿಹಾಸಿಕ ಜಂಟಿ ಸಂಪಾದಕೀಯ: ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆಯ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟ­ವಾದ ವಿಶಿಷ್ಟ ಜಂಟಿ ಸಂಪಾದಕೀಯ ಉಪಕ್ರಮದ ಮೂಲಕ ಆಂತರಿಕ ಭದ್ರತೆಯ ವಿಷಯದಲ್ಲಿ ಎರಡೂ ದೇಶಗಳು ಜಾಗತಿಕ ಸಹಭಾಗಿಗಳು ಎಂಬ ವಿಷಯವನ್ನು ಮೋದಿ  ಮತ್ತು ಒಬಾಮ ಜಗತ್ತಿಗೆ ಸಾರಿ ಹೇಳಿದ್ದಾರೆ.

ಕಾನೂನುಬದ್ಧ ವ್ಯಾಪಾರಕ್ಕಾಗಿ ಸಾಗರ ಸಂಚಾರ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಎರಡೂ ದೇಶಗಳು ಕೆಲಸ ಮಾಡಲಿವೆ ಎಂದು ಸಂಪಾದಕೀಯ­ದಲ್ಲಿ ಹೇಳಲಾಗಿದೆ. ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ನೆರೆಯ ದೇಶಗಳೊಂದಿಗೆ ಸಂಘರ್ಷಕ್ಕೆ ಇಳಿದಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

ಎರಡೂ ದೇಶಗಳು ಸಮೃದ್ಧ, ವಿಶ್ವಾಸಾರ್ಹ, ದೀರ್ಘ ಕಾಲ ಬಾಳಿಕೆಯ ಸಂಬಂಧವನ್ನು ಹೊಂದಿವೆ. ಈ ಸಂಬಂಧ ವಿಸ್ತರಣೆಗೊಳ್ಳುತ್ತಲೂ ಇದೆ. ಆದರೆ ಈ ನಂಟಿನ ನೈಜ ಸಾಮರ್ಥ್ಯ ಇನ್ನಷ್ಟೇ ಪ್ರಕಟಗೊಳ್ಳ­ಬೇಕಿದೆ. ಸಂಬಂಧದ ನೈಜ ಶಕ್ತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದ್ದರೂ  ಭಾರತ­ದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿ­ರು­­ವುದು ಸಂಬಂಧದ ವಿಸ್ತಾರ ಮತ್ತು ಆಳವನ್ನು ಇನ್ನಷ್ಟು ಹೆಚ್ಚಿಸಲು ಅವ­ಕಾಶ ಸೃಷ್ಟಿಸಿದೆ ಎಂದು ನಾಯಕರು ಹೇಳಿದ್ದಾರೆ.

‘ಬಾಹ್ಯಾಕಾಶದ ಶೋಧ ನಮ್ಮ ಸೃಜನಾತ್ಮಕತೆಗೆ ಕಿಡಿ ಹಚ್ಚುತ್ತಲೇ ಇರು­ತ್ತದೆ. ನಮ್ಮ ಮಹತ್ವಾಕಾಂಕ್ಷೆಗೆ ಮತ್ತೆ ಮತ್ತೆ ಸವಾಲು ಒಡ್ಡುತ್ತದೆ. ಎರಡೂ ದೇಶಗಳ ನೌಕೆಗಳು ಮಂಗಳನ ಕಕ್ಷೆಯ­ಲ್ಲಿವೆ ಎಂಬ ಅಂಶ ಅದರದ್ದೇ ಆದ ಕತೆ ಹೇಳುತ್ತದೆ. ಉತ್ತಮ ನಾಳೆಯ ಭರವಸೆ  ಭಾರತೀಯರು ಮತ್ತು ಅಮೆರಿ­ಕನ್ನರಿಗೆ ಸೀಮಿತವಲ್ಲ. ಇಡೀ ಜಗತ್ತಿನ ಮುನ್ನಡೆಗೆ ನಾವು ಜೊತೆ­ಯಾಗಿ ಸಾಗುತ್ತೇವೆ’ ಎಂದು ಸಂಬಂಧ­ವನ್ನು ಇಬ್ಬರು ನಾಯಕರು ಬಣ್ಣಿಸಿ­ದ್ದಾರೆ. 21ನೇ ಶತಮಾನದ ನಮ್ಮ ಸಹ­ಭಾಗಿತ್ವದ ಕೇಂದ್ರ ನೆಲೆ ಇದೇ ಆಗಿದೆ.

ಜೊತೆಯಾಗಿ ನಾವು ಮುಂದಕ್ಕೆ ಸಾಗೋಣ (ಚಲೇ  ಸಾಥ್‌ ಸಾಥ್‌, ಫಾರ್ವರ್ಡ್‌ ವಿ ಗೋ) ಎಂದು ಮೋದಿ ಮತ್ತು ಒಬಾಮ ಅವರು ಎರಡೂ ದೇಶಗಳ ಬಾಂಧ್ಯವಕ್ಕೆ ಹೊಸ ವ್ಯಾಖ್ಯೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.