ADVERTISEMENT

‘ಜನರ ರಾಷ್ಟ್ರಪತಿ’ಗೆ ಜನಪ್ರೀತಿಯ ಸ್ಮಾರಕ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 19:43 IST
Last Updated 27 ಜುಲೈ 2017, 19:43 IST
‘ಜನರ ರಾಷ್ಟ್ರಪತಿ’ಗೆ ಜನಪ್ರೀತಿಯ ಸ್ಮಾರಕ
‘ಜನರ ರಾಷ್ಟ್ರಪತಿ’ಗೆ ಜನಪ್ರೀತಿಯ ಸ್ಮಾರಕ   

ಚೆನ್ನೈ: ತಮಿಳುನಾಡಿನ ರಾಮೇಶ್ವರದಲ್ಲಿ ನಿರ್ಮಿಸಲಾಗಿರುವ ಮಾಜಿ ರಾಷ್ಟ್ರಪತಿ ಮತ್ತು ಕ್ಷಿಪಣಿ ತಂತ್ರಜ್ಞ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದರು.

ಕಲಾಂ ಅವರ ಎರಡನೇ ಪುಣ್ಯತಿಥಿಯಂದು (2015ರ ಜುಲೈ 27ರಂದು ಅವರು ನಿಧನರಾಗಿದ್ದರು) ಸ್ಮಾರಕ ಲೋಕಾರ್ಪಣೆಗೊಂಡಿದೆ.
ರಾಮೇಶ್ವರ ಬಳಿಯಲ್ಲಿರುವ ಕಲಾಂ ಹುಟ್ಟೂರು ಪೀಕರಂಬುವಿನಲ್ಲಿ ಈ ಸ್ಮಾರಕವನ್ನು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ನಿರ್ಮಿಸಿದೆ.

ಕಟ್ಟಡದ ಒಳಗಿರುವ ಕಲಾಂ ಸಮಾಧಿಗೆ ನಮನ ಸಲ್ಲಿಸಿದ ಪ್ರಧಾನಿ, ಅಲ್ಲಿ ಸ್ಥಾಪಿಸಲಾಗಿರುವ ಅವರ ತಾಮ್ರದ ಪ್ರತಿಮೆ ಅನಾವರಣ ಗೊಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ‘ಈ ಸ್ಮಾರಕವು  ಕಲಾಂ ಜೀವನ, ಯಶಸ್ಸು, ಸಾಧನೆಗಳನ್ನು ಬಿಂಬಿಸುತ್ತದೆ’ ಎಂದರು. ‘ಇದುವೆರೆಗೂ ದೇವಾಲಯಗಳ ಭೇಟಿಗಾಗಿ ಜನರು ರಾಮೇಶ್ವರಕ್ಕೆ ಬರುತ್ತಿದ್ದರು. ಇನ್ನು ಮುಂದೆ ಇಲ್ಲಿಗೆ ಭೇಟಿ ನೀಡಲು ಇನ್ನೊಂದು ಕಾರಣವೂ ಇದೆ. ಯುವಜನರು, ಯಾತ್ರಾರ್ಥಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮೋದಿ ಅವರು ಕಲಾಂ ಕುಟುಂಬ ಸದಸ್ಯ ರೊಂದಿಗೆ ಮಾತುಕತೆ ನಡೆಸಿದರು.

ಕಾರ್ಮಿಕರಿಂದ 2 ತಾಸು ಹೆಚ್ಚುವರಿ ದುಡಿಮೆ
ಪ್ರಧಾನಿ ಮೋದಿ ಅವರು ಸ್ಮಾರಕ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರನ್ನು ಶ್ಲಾಘಿಸಿದರು. ‘ತ್ವರಿತವಾಗಿ ಕಾಮಗಾರಿ ಮುಗಿಸಲು ಕಾರ್ಮಿಕರು ಪ್ರತಿ ದಿನ ಎರಡು ಗಂಟೆಗಳ ಕಾಲ ಹೆಚ್ಚುವರಿಯಾಗಿ ದುಡಿದಿದ್ದಾರೆ.  ಆ ಅವಧಿಗೆ ವೇತನ ಪಡೆಯಲು ಅವರು ನಿರಾಕರಿಸಿದ್ದಾರೆ. ಕಲಾಂ ಅವರ ನೆನಪಿಗಾಗಿ ಅವರು ನೀಡಿದ ಕಾಣಿಕೆ ಇದು’ ಎಂದು ಹೇಳಿದ ಮೋದಿ, ಎಲ್ಲರೂ ಎದ್ದು ನಿಂತು ಅವರಿಗೆ ಅಭಿನಂದನೆ ಸಲ್್ಲಿಸಬೇಕು. ಇದಕ್ಕೆ ಅವರು ಅರ್ಹರು ಎಂದರು. ತಕ್ಷಣ ಎದ್ದು ನಿಂದ ಸಭಿಕರು, ಕರತಾಡನದ ಮೂಲಕ ಕಾರ್ಮಿಕರು, ವಾಸ್ತುಶಿಲ್ಪಿಗಳು ಹಾಗೂ ಸ್ಮಾರಕ ನಿರ್ಮಾಣದಲ್ಲಿ ತೊಡಗಿಕೊಂಡವರನ್ನು ಅಭಿನಂದಿಸಿದರು. ಕರ್ನಾಟಕ, ತಮಿಳುನಾಡು, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ 500ಕ್ಕೂ ಹೆಚ್ಚು ಕಾರ್ಮಿಕರು ಸ್ಮಾರಕ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

ವಿಜ್ಞಾನ ವಾಹನ
ಎ.ಪಿ.ಜೆ ಅಬ್ದುಲ್‌ ಕಲಾಂ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ರೂಪಿಸಿರುವ ಡಿಜಿಟಲ್‌ ತಂತ್ರಜ್ಞಾನ ಆಧರಿತ ಸಂಚಾರಿ ಮ್ಯೂಸಿಯಂ, ‘ಕಲಾಂ 2020 ವಿಜ್ಞಾನ ವಾಹನ’ಕ್ಕೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ‘ಕ್ಷಿಪಣಿ ಮಾನವ’ ಎಂದೇ ಖ್ಯಾತರಾದ ಕಲಾಂ ಅವರು ವಿದ್ಯಾರ್ಥಿ ಜೀವನದಲ್ಲಿ, ಇಸ್ರೊ ಮತ್ತು ಡಿಆರ್‌ಡಿಒದಲ್ಲಿ ಸೇವೆ ಸಲ್ಲಿಸಿದ್ದಾಗ ಮಾಡಿದ್ದ ವೈಜ್ಞಾನಿಕ ಸಾಧನೆಗಳನ್ನು  ಈ ವಾಹನವು ಪ್ರದರ್ಶಿಸಲಿದೆ.

ಏನೇನಿದೆ?
l 45 ಅಡಿ ಉದ್ದ ಮತ್ತು ನಾಲ್ಕು ಟನ್‌ ತೂಕವಿರುವ ಅಗ್ನಿ–2 ಕ್ಷಿಪಣಿಯ ಪ್ರತಿಕೃತಿಯನ್ನು ಆವರಣದಲ್ಲಿ ಸ್ಥಾಪಿಸಲಾಗಿದೆ.
l ನಾಲ್ಕು ಸಭಾಂಗಣಗಳಲ್ಲಿ ಕಲಾಂ ಅವರ ಜೀವನ ಮತ್ತು ಸಾಧನೆ ಬಿಂಬಿಸುವ ಚಿತ್ರಪಟಗಳು
l ರುದ್ರವೀಣೆ, ಸುಖೋಯ್‌ 30 ಎಂಕೆ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದಾಗ ಧರಿಸಿದ್ದ ದಿರಿಸು ಸೇರಿದಂತೆ ಕಲಾಂ ಅವರಿಗೆ ಸೇರಿದ ವಸ್ತುಗಳ ಸಂಗ್ರಹ
l ಕಲಾಂ ಅವರ ಅಪರೂಪದ 900 ಕಲಾಕೃತಿಗಳು ಮತ್ತು 200 ಛಾಯಾಚಿತ್ರಗಳು
l ಕಲಾಂ ಕೆಲಸ ಮಾಡಿರುವ ರಾಕೆಟ್‌, ಕ್ಷಿಪಣಿಗಳ ಮಾದರಿಗಳು

ವೈಶಿಷ್ಟ್ಯ
l 2016ರ ಜುಲೈ 27ಕ್ಕೆ ಶಂಕು ಸ್ಥಾಪನೆ. ಕಲಾಂ ಹುಟ್ಟಿದ ದಿನವಾದ ಅಕ್ಟೋಬರ್‌ 15ಕ್ಕೆ  ಕಾಮಗಾರಿ ಆರಂಭ
l ನಿರ್ಮಾಣಕ್ಕೆ ಬಳಸಿದ ವಸ್ತುಗಳನ್ನು ದೇಶದ ವಿವಿಧ ರಾಜ್ಯಗಳಿಂದ ತರಲಾಗಿದೆ
l ಸ್ಮಾರಕದ ಪ್ರವೇಶದ್ವಾರ ಇಂಡಿಯಾ ಗೇಟ್‌ನ ವಿನ್ಯಾಸವನ್ನು ಹೋಲುತ್ತದೆ
l ಕಟ್ಟಡದ ಮೇಲ್ಭಾಗದಲ್ಲಿರುವ ಗುಮ್ಮಟವು ರಾಷ್ಟ್ರಪತಿ ಭವನದ ಗುಮ್ಮಟಗಳ ಮಾದರಿಯಲ್ಲಿದೆ.
l ವರ್ಷಕ್ಕೆ ಎರಡು ಬಾರಿ, ಅಂದರೆ ಕಲಾಂ ಹುಟ್ಟಿದ ದಿನ (ಅಕ್ಟೋಬರ್‌ 15) ಮತ್ತು ನಿಧನ ಹೊಂದಿದ ದಿನದಂದು (ಜುಲೈ 27) ಸೂರ್ಯನ ಬೆಳಕು ನೇರವಾಗಿ ಸಮಾಧಿಯನ್ನು ಸ್ಪರ್ಶಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.