ADVERTISEMENT

ಜಯಚಂದ್ರ ಹಸ್ತಕ್ಷೇಪಕ್ಕೆ ಬೇಸರ

ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ನವದೆಹಲಿ: ‘ಕಾನೂನು ಸಚಿವ ಟಿ.ಬಿ.ಜಯಚಂದ್ರ ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ಬೇಸರ­ವಾಗಿದ್ದು ನಿಜ. ಅವರ ನಡವಳಿಕೆಯಿಂದ ಬೇಸರ­ವಾಗಿಲ್ಲ­ವೆಂದು ಹೇಳಿದರೆ ಸುಳ್ಳಾಗುತ್ತದೆ’ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಹೇಳಿ­ದ್ದಾರೆ. ಇದರಿಂದಾಗಿ ಸಿದ್ದರಾಮಯ್ಯನವರ ಸಂಪುಟ ಸಚಿವರ ನಡುವಣ ಶೀತಲ ಸಮರ ಬಹಿರಂಗಕ್ಕೆ ಬಂದಿದೆ.

ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲು ಗುರುವಾರ ದೆಹಲಿಗೆ ಬಂದಿದ್ದ ಶ್ರೀನಿವಾಸ ಪ್ರಸಾದ್‌, ತಮ್ಮ ಇಲಾಖೆಗೆ ಸಂಬಂಧಪಟ್ಟ ವ್ಯವಹಾರ­ಗಳಲ್ಲಿ ಹಸ್ತಕ್ಷೇಪ ಮಾಡಿದ ಕಾನೂನು ಸಚಿವ ಟಿ.ಬಿ ಜಯ­ಚಂದ್ರ ಅವರಿಗೆ ಎಚ್ಚರಿಕೆ ನೀಡಿದ್ದಾಗಿ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು. ಅದು ಮುಗಿದ ಅಧ್ಯಾಯ. ಮತ್ತೆ ಕೆದಕುವುದು ಬೇಡ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದರು.

ಸಚಿವರು ತಮ್ಮ ತಮ್ಮ ಇಲಾಖೆಗಳ ಕೆಲಸಗಳನ್ನು ಮಾಡ­ಬೇಕೇ ವಿನಾ ಬೇರೆಯವರ ಇಲಾಖೆಗಳಲ್ಲಿ ಮೂಗು ತೂರಿಸುವುದು ಸರಿಯಲ್ಲ. ಹಿರಿಯ ಸಚಿವರು ಬೇಕಾದರೆ ಸಲಹೆಗಳನ್ನು ಕೊಡಬಹುದು. ಆದರೆ, ಮತ್ತೊಬ್ಬರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡ­ಬಾರದು. ನಾನೂ ರಾಜ್ಯದ ಹಿರಿಯ ಸಚಿವ. ಕೇಂದ್ರ­ದಲ್ಲಿ ಸಚಿವನಾಗಿ ಅನುಭವ ಇದೆ. ಈ ಮಾತನ್ನು ಜಯಚಂದ್ರ ಅವರಿಗೆ ನೇರವಾಗಿ  ಹೇಳಿದ್ದೇನೆ ಎಂದು ಪ್ರಸಾದ್‌ ಸ್ಪಷ್ಟಪಡಿಸಿದರು.

ಜಯಚಂದ್ರ ಕೆಲ ವಾರದ ಹಿಂದೆ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರನ್ನು ಭೇಟಿ ಮಾಡಿ ಪ್ರವಾಹ ಹಾನಿ ನೆರವು ನೀಡುವಂತೆ ಕೇಳಿದ್ದರು. ಆದರೆ, ಕಾನೂನು ಸಚಿವರು ದೆಹಲಿಗೆ ಬಂದು, ತಮ್ಮ ಇಲಾಖೆ ಪರವಾಗಿ ಮನವಿ ಸಲ್ಲಿಸಿದ್ದ ವಿಷಯ ಪ್ರಸಾದ್‌ ಅವರ ಗಮನಕ್ಕೆ ಬಂದಿರಲಿಲ್ಲ. ಮುಖ್ಯ­ಮಂತ್ರಿ ಸಿದ್ದರಾಮಯ್ಯ ಕಾನೂನು ಸಚಿವರನ್ನು ದೆಹಲಿಗೆ ಕಳುಹಿಸಿದ್ದರು. ಇದರಿಂದ ಕೆರಳಿದ್ದ ಕಂದಾಯ ಸಚಿವರು ಮುಖ್ಯಮಂತ್ರಿ ಬಳಿ ಅಸಮಾಧಾನ ತೋಡಿಕೊಂಡಿದ್ದರು. ಅತಿಕ್ರಮಣ ಭೂಮಿ ವಶಪಡಿಸಿಕೊಳ್ಳಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಶ್ವೇತ ಪತ್ರ ಹೊರ­ತರುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.