ADVERTISEMENT

ಜಶೋದಾಬೆನ್ ಅವರಿಗೂ ಎಸ್ ಪಿಜಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 25 ಮೇ 2014, 10:45 IST
Last Updated 25 ಮೇ 2014, 10:45 IST

ಭೋಪಾಲ್ (ಪಿಟಿಐ): ಅವರು ಒಂದೇ ಸೂರಿನಡಿಯಲ್ಲಿ ದಶಕಗಳ ಕಾಲ ವಾಸವಾಗಿ ಇದ್ದಿಲ್ಲದೇ ಇರಬಹುದು, ಆದರೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನಿಂದ ದೆಹಲಿಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿರುವಂತೆಯೇ, ಅವರ ಪತ್ನಿ ಜಶೋದಾಬೆನ್ ಅವರಿಗೂ ಅವರ ಗಂಡನಿಗೆ ಲಭಿಸುವಂತಹುದೇ ಭದ್ರತಾ ಲಭಿಸಲಿದೆ.

ಎಸ್ ಪಿ ಜಿ ನಿಯಮಗಳ ಪ್ರಕಾರ, 62ರ ಹರೆಯದ ಜಶೋದಾಬೆನ್ ಅವರು ಶೇಕಡಾ 100ರಷ್ಟು ಎಸ್ ಪಿಜಿ ರಕ್ಷಣೆಗೆ ಅರ್ಹರಾಗಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಮೋದಿ ಅವರಿಗೆ ನೀಡುವಷ್ಟೇ ರಕ್ಷಣೆಯನ್ನು ಎಸ್ ಪಿ ಜಿ ಮೋದಿಯವರ ಪತ್ನಿಗೂ ನೀಡಬೇಕು ಎಂದು  ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಧಾನ ಮಂತ್ರಿಯವರ ಕುಟುಂಬದ ಪ್ರಥಮ ಸದಸ್ಯರಿಗೆ ಪ್ರಧಾನಿಯವರಿಗೆ ಕೊಟ್ಟಷ್ಟೇ ಪ್ರಮಾಣದ ಭದ್ರತೆಯನ್ನು ಒದಗಿಸಬೇಕು ಎಂಬುದಾಗಿ ಮಧ್ಯ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ಸುಭಾಶ ಚಂದ್ರ ತ್ತಿಪಾಠಿ ಪಿಟಿಐಗೆ ತಿಳಿಸಿದರು.

ಜಶೋದಾಬೆನ್ ಅವರ ಪತಿ ಜೊತೆಗಿನ ದಾಂಪತ್ಯದ ಸ್ಥಿತಿಗತಿ ಏನೇ ಇದ್ದರೂ ಈ ನಿಯಮ ಮೋದಿಯವರ ಪತ್ನಿಗೂ ಅನ್ವಯಿಸುತ್ತದೆ ಎಂದು ಅವರು ನುಡಿದರು. ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಅವಧಿಯಲ್ಲಿ ತ್ರಿಪಾಠಿಯವರು ಪ್ರಧಾನಿಯವರ ಭದ್ರತಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಉತ್ತರ ಗುಜರಾತಿನ ಮೆಹಸಾನಾ ಜಿಲ್ಲೆಯ ಈಶ್ವರವಾಡದ ಪುಟ್ಟ ಗ್ರಾಮದಲ್ಲಿ ಜಶೋದಾಬೆನ್ ಅವರು ತಮ್ಮಿಬ್ಬರು ಸಹೋದರರ ಜೊತೆಗೆ ವಾಸವಾಗಿದ್ದಾರೆ.

1988ರಲ್ಲಿ ಜಾರಿಗೊಂಡಿರುವ ಎಸ್ ಪಿ ಜಿ ಕಾಯ್ದೆಯು 1991, 1994 ಮತ್ತು 1999ರಲ್ಲಿ ತಿದ್ದುಪಡಿಗೊಂಡಿದೆ. ಪ್ರಧಾನಿ ಮತ್ತು ಅವರ ಕುಟುಂಬದ ಪ್ರಥಮ ಸದಸ್ಯರಿಗೆ ಎಸ್ ಪಿ ಜಿ ಭದ್ರತೆ ಒದಗಿಸಲು ಕಾಯ್ದೆ ಅವಕಾಶ ನೀಡಿದೆ.

ಯಾರೇ ಮಾಜಿ ಪ್ರಧಾನಿಗಳು ಅಥವಾ ಅವರ ಕುಟುಂಬಗಳ ಪ್ರಥಮ ಸದಸ್ಯರು ಅಧಿಕಾರಾವಧಿ ಮುಗಿದ ದಿನದಿಂದ 10 ವರ್ಷಗಳ ಕಾಲ ಎಸ್ ಪಿ ಜಿ ಭದ್ರತೆ ಪಡೆಯಲು ಅರ್ಹರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.