ADVERTISEMENT

‘ಜಿಎಸ್‌ಟಿಯಿಂದ ವಿದ್ಯುತ್‌ ದರ ಏರದು’

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
‘ಜಿಎಸ್‌ಟಿಯಿಂದ ವಿದ್ಯುತ್‌ ದರ ಏರದು’
‘ಜಿಎಸ್‌ಟಿಯಿಂದ ವಿದ್ಯುತ್‌ ದರ ಏರದು’   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ಮೇಲೆ ವಿದ್ಯುತ್ ದರದಲ್ಲಿ ಯಾವುದೇ ರೀತಿಯ ಏರಿಕೆ ಉಂಟಾಗುವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ಪೀಯೂಷ್ ಗೋಯಲ್ ತಿಳಿಸಿದರು.

ವಿದ್ಯುತ್, ಕಲ್ಲಿದ್ದಲು, ಗಣಿಗಾರಿಕೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದ ಪ್ರತಿನಿಧಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರತಿ ಯುನಿಟ್ ವಿದ್ಯುತ್‌ಗೆ ಒಂದೆರಡು ಪೈಸೆ ವ್ಯತ್ಯಾಸ ಆಗಬಹುದಷ್ಟೆ’ ಎಂದು ಹೇಳಿದರು.

ಜುಲೈ ಒಂದರಿಂದ ಜಾರಿಯಾಗಲಿರುವ ಜಿಎಸ್‌ಟಿಯ ಬಗ್ಗೆ ಯಾರೂ ಆತಂಕ ವ್ಯಕ್ತಪಡಿಸಿಲ್ಲ ಮತ್ತು ಅದನ್ನು ಮುಂದೂಡಬೇಕು ಎಂದು ಯಾರೂ ಒತ್ತಾಯಿಸಲಿಲ್ಲ ಎಂದು ಹೇಳಿದರು.

ADVERTISEMENT

ಸಭೆಯಲ್ಲಿ ಹಾರು ಬೂದಿಯ ಉಪ ಉತ್ಪನ್ನಗಳು, ಕೇಬಲ್‌ಗಳ ಮೇಲಿನ ತೆರಿಗೆಯ ಬಗ್ಗೆ ಚರ್ಚೆ ನಡೆಯಿತು ಎಂದು ಗೋಯಲ್ ಹೇಳಿದರು.

ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳ ಹಾರು ಬೂದಿ ಬಳಕೆಯ ಬಗ್ಗೆ ನಿಖರವಾದ ಮಾಹಿತಿ ಒದಗಿಸಿ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಕಡಿಮೆ ತೆರಿಗೆ ಹಾಕಲು ಪ್ರಸ್ತಾಪಿಸಬೇಕು ಎಂಬ ಕೋರಿಕೆ ಬಂದಿದೆ ಎಂದರು.

ಕೆಲವು ರೀತಿಯ ಕೇಬಲ್‌ಗಳಿಗೆ ಶೇಕಡ 28ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ  ಪ್ರಸ್ತಾಪಿಸಿ ತೆರಿಗೆಯನ್ನು ಕಡಿಮೆ ಮಾಡಲು ಕೋರಲಾಗುತ್ತದೆ ಎಂದರು.

ಒಂದೇ ಕ್ಷೇತ್ರದ ಉತ್ಪನ್ನಗಳಿಗೆ ವಿವಿಧ ಹಂತದ ತೆರಿಗೆ ವಿಧಿಸದಂತೆ ಕೋರಲಾಗುತ್ತದೆ. ತೆರಿಗೆ ಪ್ರಮಾಣದಲ್ಲಿ ಭಾರಿ ಹೆಚ್ಚಳ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಜಿಎಸ್‌ಟಿ ಜಾರಿಗೆ ಮೊದಲು ಮತ್ತು ನಂತರದ ತೆರಿಗೆ ಸಂಗ್ರಹದ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.