ADVERTISEMENT

ಜಿಎಸ್‌ಟಿ ಮಸೂದೆ ಒಮ್ಮತದತ್ತ ದಾಪುಗಾಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ಕಾಯ್ದೆ (ಜಿಎಸ್‌ಟಿ) ಮಸೂದೆ ಬಗ್ಗೆ ಒಮ್ಮತ ಮೂಡಿಸುವ ಪ್ರಯತ್ನ ವೇಗ ಪಡೆದುಕೊಂಡಿದ್ದು, ವಿರೋಧ ಪಕ್ಷಗಳ ಮುಖಂಡರ ಜತೆ ಸರ್ಕಾರ ಅನೌಪಚಾರಿಕ ಮಾತುಕತೆ ಆರಂಭಿಸಿದೆ.

ಇದು, ಮುಂದಿನ ವಾರದಲ್ಲಿ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಚರ್ಚೆಗೆ ಬರುವ ಭರವಸೆ ಮೂಡಿಸಿದೆ. ಜಿಎಸ್‌ಟಿಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌, ಸರ್ಕಾರದ ಪ್ರಯತ್ನವನ್ನು ‘ರಚನಾತ್ಮಕ ಮತ್ತು ಸಕಾರಾತ್ಮಕ’ ಎಂದು ಬಣ್ಣಿಸಿದೆ.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ಕಾಂಗ್ರೆಸ್‌, ಎಸ್‌ಪಿ, ಜೆಡಿಯು ಮತ್ತು ಸಿಪಿಎಂ ಮುಖಂಡರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ರಾಜ್ಯಸಭೆ ಸದಸ್ಯ ಆನಂದ್‌ ಶರ್ಮಾ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಆಜಾದ್‌ ಅವರ ಜತೆ ಜೇಟ್ಲಿ ಮಾತುಕತೆ ನಡೆಸಿದ್ದಾರೆ.

‘ಜಿಎಸ್‌ಟಿ ಮಸೂದೆ ಬಗ್ಗೆ ಸಹಮತ ರೂಪಿಸಲು ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಶರ್ಮಾ ತಿಳಿಸಿದ್ದಾರೆ. ಆದರೆ ಮಾತುಕತೆ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.

ಯೆಚೂರಿ ಕಳವಳ: ಜಿಎಸ್‌ಟಿ ಜಾರಿ ನಂತರ, ರಾಜ್ಯಗಳ ಹಣಕಾಸಿನ ಅಗತ್ಯಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಕೇಂದ್ರ ನೀಡಬೇಕು ಎಂದು ಎಡಪಕ್ಷಗಳೂ ಸೇರಿದಂತೆ ಐದು ಪಕ್ಷಗಳು ಒತ್ತಾಯಿಸಿವೆ.

ಸಿಪಿಎಂ, ಸಿಪಿಐ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಜು ಜನತಾ ದಳ ಪಕ್ಷಗಳ ಮುಖಂಡರ ಜೊತೆ ಸಚಿವ  ಜೇಟ್ಲಿ ನಡೆಸಿದ ಮಾತುಕತೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ.

ಮಾರಾಟ ತೆರಿಗೆ, ಸರ್‌ಚಾರ್ಜ್‌ ಅಥವಾ ಸೆಸ್‌ ಮೂಲಕ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ರಾಜ್ಯಗಳ ಅಧಿಕಾರ ಜಿಎಸ್‌ಟಿ ಜಾರಿಗೊಂಡ ನಂತರ ಇರುವುದಿಲ್ಲ. ರಾಜ್ಯಗಳು ಹಣಕ್ಕಾಗಿ ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ಬರಬೇಕಾಗುತ್ತದೆ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.