ADVERTISEMENT

ಜಿದ್ದಾಜಿದ್ದಿಯ ಮೊದಲ ಹಂತ

ಗುಜರಾತ್‌ ವಿಧಾನಸಭೆ ಚುನಾವಣೆ: 89 ಕ್ಷೇತ್ರಗಳಲ್ಲಿ ಇಂದು ಮತದಾನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 19:38 IST
Last Updated 8 ಡಿಸೆಂಬರ್ 2017, 19:38 IST
ಜಿದ್ದಾಜಿದ್ದಿಯ ಮೊದಲ ಹಂತ
ಜಿದ್ದಾಜಿದ್ದಿಯ ಮೊದಲ ಹಂತ   

ಅಹಮದಾಬಾದ್‌: ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ನ ನಡುವೆ ಜಿದ್ದಾಜಿದ್ದಿನ ಪ್ರಚಾರಕ್ಕೆ ಸಾಕ್ಷಿಯಾದ ಗುಜರಾತ್‌ನ ವಿಧಾನಸಭೆಗೆ ಮೊದಲ ಹಂತದ ಮತದಾನ ಶನಿವಾರ ನಡೆಯಲಿದೆ.
ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಆ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು. ಮೋದಿ ಅವರ ತವರು ರಾಜ್ಯದಲ್ಲಿ 22 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಈ ಬಾರಿ ಅಧಿಕಾರ ಹಿಡಿಯಲೇಬೇಕು ಎಂದು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಅಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.

ಹೀಗಾಗಿಯೇ, ಹಲವು ಬಾರಿ ವೈಯಕ್ತಿಕ ಟೀಕೆ, ಗೇಲಿಯ ಮಟ್ಟಕ್ಕೆ ಚುನಾವಣಾ ಪ್ರಚಾರ ಇಳಿದಿತ್ತು. 

ಚುನಾವಣೆಯ ಕೇಂದ್ರ ವಿಚಾರ ಅಭಿವೃದ್ಧಿಯನ್ನು ಬಿಟ್ಟು ಬೇರೆಲ್ಲೂ ಹೋಗಬಾರದು ಎಂದು ಕಾಂಗ್ರೆಸ್‌ ನಿಗಾ ವಹಿಸಿದೆ. ಹಾಗಾಗಿಯೇ ಮೋದಿ ಅವರನ್ನು ‘ನೀಚ ವ್ಯಕ್ತಿ’ ಎಂದು ಜರೆದ ಮಣಿಶಂಕರ್‌ ಅಯ್ಯರ್‌ ಅವರನ್ನು ಮತದಾನಕ್ಕೆ ಎರಡು ದಿನ ಮೊದಲು ಪಕ್ಷದಿಂದ ಅಮಾನತು ಮಾಡುವ ಮೂಲಕ ಚುನಾವಣೆಯ ಬಿಸಿ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ADVERTISEMENT

ಅಯೋಧ್ಯೆಯ ನಿವೇಶನ ವಿವಾದ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಏರಿಕೆ, ರಾಹುಲ್‌ ಅವರಿಂದ ದೇವಾಲಯಗಳಿಗೆ ಸಂದರ್ಶನಗಳನ್ನು ಬಿಜೆಪಿ ಮುಖ್ಯವಾಗಿ ಪ್ರಸ್ತಾಪಿಸಿದೆ. ಮೋದಿ ಅವರ ಭದ್ರಕೋಟೆಯಲ್ಲಿ ರಾಹುಲ್‌ ಅವರು ಹಿಂದೆಂದೂ ಇಲ್ಲದ ರೀತಿಯಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದಾರೆ. ಮೋದಿ 15 ರ‍್ಯಾಲಿಗಳನ್ನು ನಡೆಸಿದ್ದಾರೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಮತದಾನದ ಮೊದಲಿನ ದಿನ ಅಂದರೆ ಶುಕ್ರವಾರ ಸಂಜೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕಳೆದ ಬಾರಿ ಪ್ರಣಾಳಿಕೆಯಲ್ಲಿ ಬಿಜೆಪಿ ಭಾರಿ ಭರವಸೆಗಳನ್ನು ನೀಡಿತ್ತು. ಆದರೆ ಈ ಬಾರಿ ಯಾವುದೇ ನಿರ್ದಿಷ್ಟ ಭರವಸೆ ಇಲ್ಲ. ಬದಲಿಗೆ ಕಳೆದ ಐದು ವರ್ಷಗಳಲ್ಲಿ ಆರ್ಥಿಕ ವೃದ್ಧಿ ದರ ಶೇ 10ಕ್ಕಿಂತಲೂ ಹೆಚ್ಚು ಇತ್ತು ಎಂದು ಹೇಳಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.  ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ, ಕಾಂಗ್ರೆಸ್‌ ನೀಡಿರುವ ಭರವಸೆಗಳು ಕಾರ್ಯಸಾಧುವಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.