ADVERTISEMENT

ಜೆಡಿಯು, ಆರ್‌ಜೆಡಿ ವಿಲೀನ ಸಾಧ್ಯತೆ

ಬಿಜೆಪಿ ಮುನ್ನಡೆ ತಡೆಗೆ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ಪಟ್ನಾ (ಐಎಎನ್‌ಎಸ್‌): ಬಿಹಾರವು ಈ ದಶಕದ ಅತ್ಯಂತ ದೊಡ್ಡ ರಾಜಕೀಯ ಮರು ಹೊಂದಾಣಿಕೆಗೆ ಸಾಕ್ಷಿಯಾಗುವ ಸಂಭವ ಇದೆ. ಬಿಜೆಪಿಯ ಮುನ್ನಡೆ­ಯನ್ನು ತಡೆಯುವುದಕ್ಕಾಗಿ ಲಾಲು ಪ್ರಸಾದ್‌ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)
ಮತ್ತು ಆಡಳಿತಾ­ರೂಢ ಜನತಾ ದಳ–ಸಂಯುಕ್ತ (ಜೆಡಿಯು) 2015ರ ರಾಜ್ಯ ವಿಧಾನ­ಸಭೆ ಚುನಾವಣೆಗೆ ಮೊದಲು ಒಂದಾಗ­ಬಹುದು ಎಂಬ ಮಾತು ಕೇಳಿ ಬರುತ್ತಿದೆ.

‘ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಪಡೆದ ನಂತರ ಲಾಲು ಪ್ರಸಾದ್‌, ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಮತ್ತು ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವಿಲೀನಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಲಾಲು ಪ್ರಸಾದ್‌ ಅವರಿಗೆ ನಿಕಟವಾಗಿರುವ ಆರ್‌ಜೆಡಿ ಮುಖಂಡರೊಬ್ಬರು ಹೇಳಿದ್ದಾರೆ.

ನಾಲ್ಕು ತಿಂಗಳ ಹಿಂದೆ ಬಿಹಾರದಲ್ಲಿ ಲಾಲು ಪ್ರಸಾದ್‌ ಮತ್ತು ನಿತೀಶ್‌ ಕುಮಾರ್‌ ಅವರು ಮೈತ್ರಿ ಮಾಡಿಕೊಂಡಿದ್ದರು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಎದುರಿಸುವುದಕ್ಕಾಗಿ ಕೆಲವೇ ದಿನಗಳ ಹಿಂದೆ ಸಮಾಜವಾದಿ ಪಕ್ಷ, ಜೆಡಿಯು, ಆರ್‌ಜೆಡಿ ಮತ್ತು ಜೆಡಿಎಸ್‌ಗಳು ಸಂಯುಕ್ತ ರಂಗವೊಂದನ್ನು ರೂಪಿಸಿವೆ. ಈಗ ಆರ್‌ಜೆಡಿ ಮತ್ತು ಜೆಡಿಯು ವಿಲೀನದ ಮಾತು ಬಲವಾಗಿದೆ.

ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವುದಕ್ಕಾಗಿ ವಿಲೀನ ಅಗತ್ಯ ಎಂದು ಜೆಡಿಯು ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
‘ಜೊತೆಯಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಸದ್ಯದಲ್ಲೇ ನಾವು ವಿಲೀನವಾಗಿ ಒಂದೇ ಪಕ್ಷವಾಗುವ ಸಂಭವ ಅತ್ಯಂತ ಬಲವಾಗಿದೆ’ ಎಂದು ನಿತೀಶ್‌ ಕುಮಾರ್‌ ಅವರೇ ಹೇಳಿದ್ದಾರೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೆ ಸೀಟು ಹಂಚಿಕೆ ಎರಡು ಪಕ್ಷಗಳ ನಡುವೆ ದೊಡ್ಡ ಸಮಸ್ಯೆಯಾಗಿ ಕಾಡ­ಬಹುದು. 118 ಶಾಸಕರನ್ನು ಹೊಂದಿರುವ ಜೆಡಿಯು ಹೆಚ್ಚು ಸೀಟುಗಳಿಗೆ ಬೇಡಿಕೆ ಇರಿಸಬಹುದು. 23 ಶಾಸಕ­ರನ್ನು ಹೊಂದಿರುವ ಆರ್‌ಜೆಡಿ ಕಳೆದ ಲೋಕ­ಸಭೆ ಚುನಾವಣೆಯ ಪ್ರದರ್ಶನದ ಆಧಾರ­ದಲ್ಲಿ ಹೆಚ್ಚು ಸೀಟು ಕೇಳಬಹುದು ಎಂದು ಈ ನಾಯಕರು ಹೇಳುತ್ತಾರೆ.

ಆಗಸ್ಟ್‌ನಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆ­ಯಲ್ಲಿ ಲಾಲು ಪ್ರಸಾದ್ ಮತ್ತು ನಿತೀಶ್‌ ಕುಮಾರ್‌ ಜತೆ­ಯಾಗಿ ಪ್ರಚಾರ ನಡೆಸಿದರು. ಒಟ್ಟು 10 ಕ್ಷೇತ್ರ­ಗಳಲ್ಲಿ ಆರ್‌ಜೆಡಿ, ಜೆಡಿಯು, ಕಾಂಗ್ರೆಸ್‌ ಮೈತ್ರಿಕೂಟ ಆರು ಸ್ಥಾನಗಳನ್ನು ಗೆದ್ದುಕೊಂಡಿತ್ತು.

20 ವರ್ಷಗಳ ನಂತರ ಲಾಲು ಮತ್ತು ನಿತೀಶ್‌ ಜೊತೆ­ಯಾಗಿ ಪ್ರಚಾರ ನಡೆಸಿದ್ದರು. 1991ರ ಲೋಕ­ಸಭೆ ಚುನಾವಣೆಯಲ್ಲಿ ಕೊನೆಯ ಬಾರಿ ಇವರಿಬ್ಬರು ಜೊತೆಯಾಗಿ ಪ್ರಚಾರ ಮಾಡಿದ್ದರು.

ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಬಲ­ವಾದ ಸಂದೇಶವನ್ನು ದೇಶಕ್ಕೆ ತಾವು ಮತ್ತು ನಿತೀಶ್‌ ಕುಮಾರ್‌ ನೀಡಲು ಬಯಸಿದ್ದೇವೆ ಎಂದು ಲಾಲು ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.