ADVERTISEMENT

ಜೆಡಿ(ಯು) ಜೊತೆ 'ತುರ್ತು ಹೊಂದಾಣಿಕೆ': ಕಾಂಗ್ರೆಸ್, ಆರ್ ಜೆಡಿ ಕರೆ

​ಪ್ರಜಾವಾಣಿ ವಾರ್ತೆ
Published 19 ಮೇ 2014, 10:37 IST
Last Updated 19 ಮೇ 2014, 10:37 IST

ನವದೆಹಲಿ (ಐಎಎನ್ಎಸ್): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಮತ್ತು ಕಾಂಗ್ರೆಸ್ ಪಕ್ಷವು ಜಾತ್ಯತೀತ ಮತಗಳ ಇನ್ನಷ್ಟು ವಿಭಜನೆ ತಪ್ಪಿಸುವ ಸಲುವಾಗಿ ಜೆಡಿ (ಯು) ಜೊತೆಗೆ ತುರ್ತು 'ಹೊಂದಾಣಿಕೆ' ಮಾಡಿಕೊಳ್ಳಲು ಕರೆ ನೀಡಿವೆ.

'ಭವಿಷ್ಯದಲ್ಲಿ ಜಾತ್ಯತೀತ ಮತಗಳನ್ನು ಒಗ್ಗೂಡಿಸಲು  ಜನತಾದಳ (ಯು) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ನಾವು ತಳ್ಳಿ ಹಾಕುವುದಿಲ್ಲ' ಎಂದು ಬಿಹಾರ ಕಾಂಗ್ರೆಸ್ ನಾಯಕ ಪ್ರೇಮಚಂದ್ ಮಿಶ್ರಾ ಐಎಎನ್ಎಸ್ ಗೆ ತಿಳಿಸಿದರು.

ಹಿಂದಿನ ಜನತಾದಳದ ಅಂಗಗಳೇ ಆದ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಮತ್ತು ಜೆಡಿ-ಯು ಮಧ್ಯೆ ಸಂಭಾವ್ಯ ಮರುಹೊಂದಾಣಿಕೆ ಬಗ್ಗೆ ಸುಳಿವು ನೀಡಿದ ಮಿಶ್ರಾ, 40 ಲೋಕಸಭಾ ಸ್ಥಾನಗಳನ್ನು ಹೊಂದಿರುವ 'ಬಿಹಾರದಲ್ಲಿ ವಿಶಾಲ ಹಿತಾಸಕ್ತಿ ರಕ್ಷಣೆಗೆ ಸ್ಥಾಪಿತ ಹಿತಾಸಕ್ತಿಗಳು ದಾರಿ ಮಾಡಿಕೊಡಬೇಕು ಎಂದು ಹೇಳಿದರು.

ಜಾತ್ಯತೀತ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳ ಮಧ್ಯೆ ಏನಾದರೂ ತಿಳಿವಳಿಕೆ ರೂಪಿಸಿಕೊಳ್ಳುವ ಅವಕಾಶ ಇದ್ದರೆ ಅದನ್ನು ಬಳಸಿಕೊಳ್ಳಬೇಕು. ಅಹಂಭಾವ ಮತ್ತು ಹಿಂದಿನ ವೈರತ್ವಗಳು ಕೋಮು ಶಕ್ತಿಗಳನ್ನು ಪರಾಭವಗೊಳಿಸುವ ದಾರಿಯಲ್ಲಿ ಅಡ್ಡಿಗಳಾಗಬಾರದು' ಎಂದು ದೂರವಾಣಿ ಸಂದರ್ಶನದಲ್ಲಿ ಮಿಶ್ರಾ ನುಡಿದರು.

ಮೈತ್ರಿ ಹೊಂದಿದ್ದ ಕಾಂಗ್ರೆಸ್ ಮತ್ತು ಆರ್ ಜೆಡಿ ಜಂಟಿಯಾಗಿ ಬಿಹಾರದಲ್ಲಿ ಒಟ್ಟು ಮತಗಳ ಶೇಕಡಾ 28.5ರಷ್ಟು ಮತಗಳನ್ನು ಗಳಿಸಿದ್ದರೂ ಕ್ರಮವಾಗಿ 2 ಮತ್ತು 4 ಸ್ಥಾನಗಳನ್ನು ಮಾತ್ರ ಗೆದ್ದಿವೆ.

ಆಡಳಿತಾರೂಢ ಜನತಾದಳ (ಯು) ಕೇವಲ ಎರಡು ಸ್ಥಾನಗಳನ್ನು ಗೆದ್ದುಕೊಂಡು ನೆಲಕಚ್ಚಿದೆ. ಬಿಜೆಪಿ 22 ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದ್ದರೆ, ಅದರ ಮಿತ್ರ ಪಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷವು (ಎಲ್ ಜೆಪಿ) ಆರು ಸ್ಥಾನಗಳನ್ನು ಗೆದ್ದುಕೊಂಡಿದೆ.
ಜನತಾದಳ (ಯು) ಜೊತೆಗೆ ಮೈತ್ರಿ ಸಾಧಿಸುವ ಸಾಧ್ಯತೆಗಳನ್ನು ನಾವು ತಿರಸ್ಕರಿಸಿದ್ದೇವೆ ಎನ್ನುವುದು ಸರಿಯಲ್ಲ ಎಂದು ಆರ್ ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಐಎಎನ್ ಎಸ್ ಗೆ ತಿಳಿಸಿದರು.

ಜೆಡಿ(ಯು) ಮತಗಳು ಆರ್ ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ಸೇರಿದರೆ 'ಜಾತ್ಯತೀತ' ಶಿಬಿರಕ್ಕೆ ಅನುಕೂಲವಾಗಬಲ್ಲುದು ಎಂಬುದು ಆರ್ ಜೆಡಿಗೆ ಅರಿವಾಗಿದೆ ಎಂದು ತಿವಾರಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.