ADVERTISEMENT

ಟಟ್ರಾ ಪ್ರಕರಣ: ತೇಜಿಂದರ್‌ಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2014, 10:15 IST
Last Updated 28 ಆಗಸ್ಟ್ 2014, 10:15 IST

ನವದೆಹಲಿ (ಪಿಟಿಐ): 1676 ಟಟ್ರಾ ಟ್ರಕ್‌ ಖರೀದಿ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ ಆಧಾರದಲ್ಲಿ ಸೆಪ್ಟೆಂಬರ್‌ 1ರಂದು ಹಾಜರಾಗುವಂತೆ ಮಾಜಿ ಲೆಫ್ಟಿನೆಂಟ್‌ ತೇಜಿಂದರ್ ಸಿಂಗ್ ಅವರಿಗೆ ವಿಶೇಷ ನ್ಯಾಯಾಲಯವೊಂದು ಗುರುವಾರ ಸಮನ್ಸ್ ಜಾರಿಗೊಳಿಸಿದೆ.

1676 ಟಟ್ರಾ ಟ್ರಕ್‌ಗಳ ಖರೀದಿ ಒಪ್ಪಂದ ಕಡತ ವಿಲೇವಾರಿಗೆ ಆಗಿನ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರಿಗೆ 14 ಕೋಟಿ ರೂಪಾಯಿ ಲಂಚದ ಆಮೀಷ ಒಡ್ಡಿದ ಆರೋಪ ತೇಜಿಂದರ್ ಸಿಂಗ್ ಮೇಲಿದೆ.

ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ ಹಾಗೂ  ತನಿಖೆಯ ವೇಳೆ ಸಿಬಿಐ ಎದುರು ರಕ್ಷಣಾ ಖಾತೆ ಮಾಜಿ ಸಚಿವ ಎ.ಕೆ.ಆಂಟನಿ, ವಿ.ಕೆ.ಸಿಂಗ್ ಹಾಗೂ ಇತರ ಸಾಕ್ಷಿಗಳು ನೀಡಿರುವ ಹೇಳಿಕೆಗಳನ್ನು ಆಧರಿಸಿ ಸಿಬಿಐ ವಿಶೇಷ ನ್ಯಾಯಾಧೀಶ ಮಧು ಜೈನ್‌ ಅವರು ಈ ಸಮನ್ಸ್ ಜಾರಿ ಮಾಡಿದ್ದಾರೆ.

‘ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ ಮತ್ತು ವಿ.ಕೆ.ಸಿಂಗ್, ಸೇನಾ ಸಿಬ್ಬಂದಿ ಮುಖ್ಯಸ್ಥರ ಆಗಿನ ಸಹಾಯಕ ಸೇನಾಧಿಕಾರಿ ಮೇಜರ್ ಜನರಲ್‌ ಜೆ.ಪಿ.ಸಿಂಗ್, ಆಂಟನಿ ಹಾಗೂ ಇತರ ಸಾಕ್ಷಿಗಳು, ತೇಜಿಂದರ್ ಸಿಂಗ್ ಅವರು ಲಂಚದ ಆಮೀಷ ಒಡ್ಡಿದ ಬಗ್ಗೆ ಜನರಲ್ ವಿ.ಕೆ.ಸಿಂಗ್ ಅವರು ತಮ್ಮ ಗಮನಕ್ಕೆ ತಂದಿದ್ದರು ಎಂದು ಮೇಲ್ಮನೆಯಲ್ಲಿ ಆಂಟನಿ ಅವರು ನೀಡಿದ ಹೇಳಿಕೆಯನ್ನು ಒಳಗೊಂಡ 2012ರ ಮಾರ್ಚ್‌ 27ರಂದು ರಾಜ್ಯಸಭೆ ಪ್ರಕಟಿಸಿದ್ದ ದಾಖಲೆ ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ನಾನು ಪರಿಶೀಲಿಸಿರುವೆ. ಅವುಗಳ ಆಧಾರದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 12 ಅಡಿ ವಿಚಾರಣೆ ನಡೆಸಲು ಸಾಕಷ್ಟು ಪುರಾವೆಗಳಿವೆ’ ಎಂದು ತೇಜಿಂದರ್ ಅವರಿಗೆ ಸಮನ್ಸ್‌ ಜಾರಿಗೊಳಿಸುವ ವೇಳೆ ನ್ಯಾಯಾಲಯ ತಿಳಿಸಿತು.

ಆರೋಪಿಗೆ ಸಮನ್ಸ್‌ ನೀಡಲು ಹಾಗೂ ವಿಚಾರಣೆ ಒಳಪಡಿಸಲು ಸಾಕಷ್ಟು ಸಾಕ್ಷಿಗಳಿವೆ ಎಂದು ವಾದ–ಪ್ರತಿವಾದದ ವೇಳೆ ಹಿರಿಯ ಸರ್ಕಾರಿ ಅಭಿಯೋಜಕ ವಿ.ಕೆ.ಶರ್ಮಾ ಅವರ ನ್ಯಾಯಾಲಯಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT