ADVERTISEMENT

ಟಿಕೆಟ್‌ಗಾಗಿ ಹಾರ್ದಿಕ್‌ ಗುಂಪಿನ ಕಚ್ಚಾಟ

ಪಿಟಿಐ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾಣಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹಾಜರಿದ್ದರು ಪಿಟಿಐ ಚಿತ್ರ
ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾಣಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹಾಜರಿದ್ದರು ಪಿಟಿಐ ಚಿತ್ರ   

ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಭಾನುವಾರ ಮಧ್ಯರಾತ್ರಿ ಪ್ರಕಟಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿಯ ಬಗ್ಗೆ ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ನೇತೃತ್ವದ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಿಎಎಎಸ್‌) ಆಕ್ರೋಶ ವ್ಯಕ್ತಪಡಿಸಿದೆ. ಸಮಿತಿಯ ಇಬ್ಬರಿಗೆ ಮಾತ್ರ ಟಿಕೆಟ್‌ ನೀಡಿರುವುದು ಈ ಅಸಮಾಧಾನಕ್ಕೆ ಕಾರಣ.

20 ಮಂದಿಗೆ ಟಿಕೆಟ್‌ ನೀಡಬೇಕು ಎಂದು ಸಮಿತಿ ಬೇಡಿಕೆ ಇರಿಸಿತ್ತು. ಆದರೆ ಸಮಿತಿಯ ಸದಸ್ಯರಾದ ಲಲಿತ್‌ ವಸೋಯ ಮತ್ತು ಅಮಿತ್‌ ಥುಮ್ಮರ್‌ ಅವರಿಗೆ ಮಾತ್ರ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದೆ. ಕಾಂಗ್ರೆಸ್‌ ನಡೆಗೆ ಪ್ರತಿಭಟನೆಯಾಗಿ ಈ ಇಬ್ಬರು ನಾಮಪತ್ರ ಸಲ್ಲಿಸಬಾರದು ಎಂದು ಸಮಿತಿಯ ಮುಖಂಡರು ಸೂಚಿಸಿದ್ದಾರೆ. ಆದರೆ, ವಸೋಯ ಅವರು ಧರೋಜಿ ಕ್ಷೇತ್ರದಿಂದ ಸೋಮವಾರವೇ ನಾಮಪತ್ರ ಸಲ್ಲಿಸಿದ್ದಾರೆ.

ರಾಜಕೋಟ್‌ನಲ್ಲಿ ಸೋಮವಾರಕ್ಕೆ ನಿಗದಿಯಾಗಿದ್ದ ಸಭೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿಕೆಯನ್ನು ಹಾರ್ದಿಕ್‌ ಘೋಷಿಸಬೇಕಿತ್ತು. ಆದರೆ ಟಿಕೆಟ್‌ಗೆ ಸಂಬಂಧಿಸಿ ಅತೃಪ್ತಿ ಸ್ಫೋಟವಾದ ಬಳಿಕ ರಾಜಕೋಟ್‌ನ ಕಾರ್ಯಕ್ರಮವನ್ನೇ ಹಾರ್ದಿಕ್‌ ರದ್ದುಪಡಿಸಿದ್ದಾರೆ.

ADVERTISEMENT

ಅತೃಪ್ತಿ ಸ್ಫೋಟ: 77 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನಿರೀಕ್ಷಿಸಿದಷ್ಟು ಟಿಕೆಟ್‌ ಸಿಕ್ಕಿಲ್ಲ ಎಂದು ಆಕ್ರೋಶಗೊಂಡ ಪಿಎಎಎಸ್‌ ಸದಸ್ಯರು ಸೂರತ್‌ನ ಕಾಂಗ್ರೆಸ್‌ ಕಚೇರಿಯಲ್ಲಿ ದಾಂದಲೆ ನಡೆಸಿದ್ದಾರೆ. ಪಕ್ಷದ ವಿರುದ್ಧ ಘೋಷಣೆ ಕೂಗಿದ್ದಾರೆ.

‘ಮೊದಲ ಪಟ್ಟಿಯಲ್ಲಿ ನಮ್ಮ ಸಮುದಾಯಕ್ಕೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ನ ಯಾವುದೇ ಕಚೇರಿಯ ಕಾರ್ಯನಿರ್ವಹಣೆಗೆ ಅವಕಾಶ ಕೊಡುವುದಿಲ್ಲ’ ಎಂದು ಪಿಎಎಎಸ್‌ ಸಂಚಾಲಕ ಧಾರ್ಮಿಕ್‌ ಮಾಳವೀಯ ಹೇಳಿದ್ದಾರೆ.

ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿಂಹ ಸೋಲಂಕಿ ಅವರ ಅಹಮದಾಬಾದ್‌ ನಿವಾಸದಲ್ಲಿ ಪಿಎಎಎಸ್‌ನ ಸಂಚಾಲಕ ದಿನೇಶ್‌ ಭಂಭಾನಿಯಾ ನೇತೃತ್ವದಲ್ಲಿ ದಾಂದಲೆ ನಡೆಸಲಾಯಿತು. ಕಾಂಗ್ರೆಸ್‌ ರಾಜ್ಯ ಘಟಕದ ಕೇಂದ್ರ ಕಚೇರಿಗೆ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ. ವಿವಿಧ ಸ್ಥಳಗಳಲ್ಲಿರುವ ಕಾಂಗ್ರೆಸ್‌ ಕಚೇರಿಗಳಿಂದ ಪೊಲೀಸರಿಗೆ ಕರೆ ಮಾಡಿ ರಕ್ಷಣೆ ಕೋರಲಾಗಿದೆ.

‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಿಎಎಎಸ್‌ನ ಇಬ್ಬರು ಸದಸ್ಯರಿಗೆ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ ಟಿಕೆಟ್‌ ನೀಡಿರುವ ಇತರ ಪಟೇಲ್‌ ಅಭ್ಯರ್ಥಿಗಳು ನಕಲಿ. ಕಾಂಗ್ರೆಸ್ ವಿರುದ್ಧ ಭಾರಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪಿಎಎಎಸ್‌ನ ಇನ್ನೊಬ್ಬ ಸಂಚಾಲಕ ಅಲ್ಪೇಶ್‌ ಕಥೀರಿಯ ಹೇಳಿದ್ದಾರೆ. ಕಾಂಗ್ರೆಸ್‌ ಮತ್ತು ಪಿಎಎಎಸ್‌ನ ಮುಖಂಡರ ನಡುವೆ ಭಾನುವಾರ ಸಂಜೆ ಸುದೀರ್ಘ ಮಾತುಕತೆ ನಡೆದಿತ್ತು. ಹಲವು ವಿಚಾರಗಳಿಗೆ ಸಂಬಂಧಿಸಿ ಒಮ್ಮತ ಏರ್ಪಟ್ಟಿತ್ತು ಎಂದು ಸಭೆಯ ಬಳಿಕೆ ಹೇಳಲಾಗಿತ್ತು. ಆದರೆ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ ಬಳಿಕ ಚಿತ್ರಣವೇ ಬದಲಾಯಿತು.

ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿ ಇಲ್ಲ

ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಎಲ್ಲ 182 ಕ್ಷೇತ್ರಗಳಿಗೆ ಸ್ಪರ್ಧಿಸುವುದಾಗಿ ಎನ್‌ಸಿಪಿ ಹೇಳಿದೆ.

2007 ಮತ್ತು 2012ರ ಚುನಾವಣೆಗಳಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವೆ ಮೈತ್ರಿ ಇತ್ತು. ಆದರೆ ಈ ಬಾರಿ ಸೀಟು ಹಂಚಿಕೆಯಲ್ಲಿ ಒಮ್ಮತ ಸಾಧ್ಯವಾಗದ ಕಾರಣ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಎನ್‌ಸಿಪಿ ಹೇಳಿದೆ. ಈಗ ಗುಜರಾತ್‌ ವಿಧಾನಸಭೆಯಲ್ಲಿ ಎನ್‌ಸಿಪಿಯ ಇಬ್ಬರು ಶಾಸಕರಿದ್ದಾರೆ.

ಈಗಿನ ಗುಜರಾತಿನ ಸನ್ನಿವೇಶದ ದೃಷ್ಟಿಯಿಂದ ನೋಡಿದರೆ ಎನ್‌ಸಿಪಿ ಬಹಳ ಹೆಚ್ಚು ಸೀಟುಗಳಿಗೆ ಬೇಡಿಕೆ ಇಟ್ಟಿತು. ಹಾಗಾಗಿ ಸೀಟು ಹಂಚಿಕೆ ಮಾತುಕತೆ ಮುರಿದು ಬಿತ್ತು ಎಂದು ಕಾಂಗ್ರೆಸ್ ಹೇಳಿದೆ. ‘ಗುಜರಾತಿನಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳದೆ ಇರುವುದು ನಮ್ಮ ಪಕ್ಷಕ್ಕೆ ಒಳ್ಳೆಯದು’ ಎಂದು ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಹೇಳಿದ್ದಾರೆ.

ಮುಖ್ಯಮಂತ್ರಿ ನಾಮಪತ್ರ ಸಲ್ಲಿಕೆ: ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾಣಿ ಅವರು ರಾಜಕೋಟ್‌ ಪಶ್ಚಿಮ ಕ್ಷೇತ್ರದಿಂದ ಸೋಮವಾರ ಮಧ್ಯಾಹ್ನ 12.39ಕ್ಕೆ ವಿಜಯ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.