ADVERTISEMENT

ಟೆಕಿ ಸ್ವಾತಿ ಹತ್ಯೆ ಪ್ರಕರಣ: ವಿವರ ಕೇಳಿದ ಮದ್ರಾಸ್ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 10:39 IST
Last Updated 27 ಜೂನ್ 2016, 10:39 IST
ಎಸ್‌.ಸ್ವಾತಿ
ಎಸ್‌.ಸ್ವಾತಿ   

ಚೆನ್ನೈ (ಪಿಟಿಐ): ಟೆಕಿ ಎಸ್‌.ಸ್ವಾತಿ ಹತ್ಯೆ ಪ್ರಕರಣದ ತನಿಖೆ ವಿಳಂಬವಾಗುತ್ತಿದ್ದು, ಈ ಬಗ್ಗೆ ವಿವರವಾದ ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಚೆನ್ನೈನ ಪಬ್ಲಿಕ್ ಪಾಸಿಕ್ಯೂಟರ್ ಅವರನ್ನು ಕೇಳಿದೆ.

ಹತ್ಯೆ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ನಾಗಮುತ್ತು ಮತ್ತು ವಿ.ಭಾರತಿ ದಾಸನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸ್ಥಳೀಯ ಪೊಲೀಸರು ಮತ್ತು ರೈಲ್ವೆ  ಪೊಲೀಸರ ನಡುವೆ ಸಮನ್ವಯ ಕೊರತೆ ಇದೆಯೇ ಎಂದು ಪ್ರಶ್ನಿಸಿದೆ.

ಪ್ರಕರಣದ ಕುರಿತು ವಿವರವಾದ ವರದಿ ನೀಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಷಣ್ಮುಗ ವೇಲಾಯುದಂ ಅವರಿಗೆ ಸೂಚಿಸಿರುವ ಪೀಠವು, ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸರ ನಡುವೆ ಸಮನ್ವಯದ ಕೊರತೆ ಇದ್ದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ.

ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿರುವ ನಗರ ಪೊಲೀಸ್ ಕಮಿಷನರ್ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೀಠವು, ಈ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆಯೂ ವರದಿ ನೀಡುವಂತೆ ಸೂಚಿಸಿದೆ.

ಚೆನ್ನೈನ ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಇನ್ಫೊಸಿಸ್‌ ಶಾಖೆಯ ಮಹಿಳಾ ಉದ್ಯೋಗಿ ಎಸ್‌.ಸ್ವಾತಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.