ADVERTISEMENT

ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌, ಶಾಸಕರ ಬಂಧನ

ಪಿಟಿಐ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಹರಿದುಹೋಗಿದ್ದ ಅಂಗಿಯನ್ನು ಮಾಧ್ಯಮದವರಿಗೆ ತೋರಿಸಿದ ಸ್ಟಾಲಿನ್
ಹರಿದುಹೋಗಿದ್ದ ಅಂಗಿಯನ್ನು ಮಾಧ್ಯಮದವರಿಗೆ ತೋರಿಸಿದ ಸ್ಟಾಲಿನ್   

ಚೆನ್ನೈ: ವಿಧಾನಸಭೆಯಿಂದ ತಮ್ಮನ್ನು ಹೊರಹಾಕಿದ ಸ್ಪೀಕರ್ ಕ್ರಮ ವಿರೋಧಿಸಿದ ಮರೀನಾ ಕಡಲ ಕಿನಾರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಪಕ್ಷದ ಶಾಸಕರನ್ನು ಪೊಲೀಸರು ಶನಿವಾರ ಸಂಜೆ ಬಂಧಿಸಿದರು.

ಸ್ಟಾಲಿನ್ ಮತ್ತು ಪಕ್ಷದ ಇತರ ಶಾಸಕರನ್ನು ಸದನದಿಂದ ಹೊರಹಾಕಿದ ನಂತರ ಡಿಎಂಕೆ ಪಾಳೆಯದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಹರಿದುಹೋಗಿದ್ದ ಅಂಗಿಯೊಂದಿಗೆ ವಿಧಾನಸಭೆಯಿಂದ ಹೊರಬಂದ ಸ್ಟಾಲಿನ್, ‘ನನ್ನನ್ನು ಬಲವಂತವಾಗಿ ಹೊರಗೆ ಕಳುಹಿಸಲಾಯಿತು. ನನಗೆ ಗಾಯಗಳಾಗಿವೆ’ ಎಂದು ಹೇಳಿದರು.

ವಿಧಾನಸಭೆಯಲ್ಲಿ ಧರಣಿ ನಡೆಸಲು ಯತ್ನಿಸಿದ ಸ್ಟಾಲಿನ್ ಅವರನ್ನು ಮಾರ್ಷಲ್‌ಗಳು ಎತ್ತಿಕೊಂಡು ಹೊರಗೆ ತರಬೇಕಾಯಿತು. ಮಾರ್ಷಲ್‌ಗಳು ಡಿಎಂಕೆ ಶಾಸಕರನ್ನು ಹೊರಹಾಕಿದ ನಂತರ ಸ್ಟಾಲಿನ್ ಅವರು ವಿಧಾನಸಭೆಯ ಮೊಗಸಾಲೆಯಲ್ಲಿ ಧರಣಿ ನಡೆಸಲು ಯತ್ನಿಸಿದರು.

ವಿಧಾಸನಭೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಸ್ಟಾಲಿನ್ ಅವರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ದೂರು ಸಲ್ಲಿಸಿದರು. ಸದನದಲ್ಲಿ ಮತ್ತೊಮ್ಮೆ ವಿಶ್ವಾಸ ಮತ ಯಾಚನೆಗೆ ಸೂಚಿಸಬೇಕು ಎಂದೂ ಅವರು ಆಗ್ರಹಿಸಿದರು.

ರಾಜ್ಯಪಾಲರ ಭೇಟಿ ನಂತರ ಡಿಎಂಕೆ ಶಾಸಕರು ರಾಜಭವನದ ಎದುರು ಧರಣಿ ನಡೆಸಿದರು. ‘ಶನಿವಾರ ವಿಧಾನಸಭೆಯಲ್ಲಿ ನಡೆದಿರುವುದು ತಮಿಳುನಾಡಿನ ಪಾಲಿಗೆ ಕರಾಳ ಘಟನೆ. ಈಗಿನ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

ರಾಜ್ಯದ ಬೇರೆ ಪ್ರದೇಶಗಳಲ್ಲಿ ಡಿಎಂಕೆ ಕಾರ್ಯಕರ್ತರು ಹಿಂಸಾಚಾರ ನಡೆಸಿರುವ, ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿರುವ ವರದಿ ಬಂದಿವೆ.

ಕದನ ಕಣದಂತೆ ಆದ ವಿಧಾನಸಭೆ!
ಸ್ಪೀಕರ್‌ ಪಿ. ಧನಪಾಲ್ ಮತ್ತು ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಅವರ ಹರಿದ ಅಂಗಿಗಳು, ಅಡಿಮೇಲಾದ ಕುರ್ಚಿಗಳು, ಸದನದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾಗದದ ತುಂಡುಗಳು...

ಇದು ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ಕಂಡುಬಂದ ಕದನಸದೃಶ ಚಿತ್ರಣ. ‘ನನಗೆ ನಾಚಿಕೆಯಾಗುತ್ತಿದೆ’ ಎಂದು ಸ್ಪೀಕರ್ ಧನಪಾಲ್ ಅವರು ಸದನದಲ್ಲಿ ನಡೆದ ಗದ್ದಲ ಉಲ್ಲೇಖಿಸಿ ಹೇಳಿದರು.

ಡಿಎಂಕೆ ಶಾಸಕರನ್ನು ಸದನದಿಂದ ಹೊರಹಾಕುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್‌ ಆದೇಶಿಸಿದ ನಂತರ, ವಿಧಾನಸಭೆಯು ಕುಸ್ತಿಯ ಅಖಾಡಂತೆ ಆಯಿತು. ಡಿಎಂಕೆ ಸದಸ್ಯರನ್ನು ಹೊರಹಾಕಲು ಮಾರ್ಷಲ್‌ಗಳು ಹರಸಾಹಸಪಟ್ಟರು.

‘ಹಿಂಬಾಗಿಲ ಮೂಲಕ ಅಧಿಕಾರ ಚಲಾಯಿಸುವ ಈ ವ್ಯವಸ್ಥೆಯ ಬಗ್ಗೆ ಜನರಿಗೆ ಸಿಟ್ಟಿದೆ. ನಾವು ಜನರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮನ್ನು ಹೊರಗೆ ಕಳುಹಿಸಲು ಯತ್ನಿಸಿದರೆ, ನಾವು ಆತ್ಮಹತ್ಯೆಯ ಬಗ್ಗೆಯೂ ಆಲೋಚನೆ ನಡೆಸಬೇಕಾದೀತು’ ಎಂದು ಸ್ಟಾಲಿನ್ ಅವರು ಮಾರ್ಷಲ್‌ಗಳಿಗೆ ಎಚ್ಚರಿಕೆ ನೀಡಿದರು.

ಸ್ಟಾಲಿನ್ ಅವರನ್ನು ಮಾರ್ಷಲ್‌ಗಳು ಹೊತ್ತೊಯ್ಯುತ್ತಿದ್ದಾಗ ಅವರು ತಮ್ಮ ತಲೆ ಬಡಿದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಡಿಎಂಕೆ ಶಾಸಕ ದೊರೈಮುರುಗನ್ ಅವರು ಕೆಲವು ಕಾಲ ಅಲ್ಲಿ–ಇಲ್ಲಿ ಅಡಗಿ ಮಾರ್ಷಲ್‌ಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು.

ಒಮ್ಮೆ ಅವರನ್ನು ಹೊರಹಾಕಲಾಯಿತು. ಆಗ ಅವರು ಕಾರಿಡಾರ್‌ ಮೂಲಕ ಸದನ ಪ್ರವೇಶಿಸಲು ಯತ್ನಿಸಿದರು. ಅಲ್ಲಿಯೂ ಅವರನ್ನು ಮಾರ್ಷಲ್‌ಗಳು ಅಡ್ಡಗಟ್ಟಿದರು. ಆಗ ದೊರೈಮುರುಗನ್ ಅವರು ಪತ್ರಕರ್ತರ ಗ್ಯಾಲರಿ ಮೂಲಕ ಸದನ ಪ್ರವೇಶಿಸಿದರು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.