ADVERTISEMENT

ತಮಿಳುನಾಡಿಗೆ ಕೇಂದ್ರ ತಂಡ ಭೇಟಿ ಜಲಾಶಯಗಳ ಸ್ಥಿತಿ ಅವಲೋಕನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2016, 3:58 IST
Last Updated 10 ಅಕ್ಟೋಬರ್ 2016, 3:58 IST
ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ತಾಂತ್ರಿಕ ಸಮಿತಿ ಅಧಿಕಾರಿಗಳು ಭಾನುವಾರ ತಮಿಳುನಾಡಿನ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ತಾಂತ್ರಿಕ ಸಮಿತಿ ಅಧಿಕಾರಿಗಳು ಭಾನುವಾರ ತಮಿಳುನಾಡಿನ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚೆನ್ನೈ: ಕರ್ನಾಟಕದಲ್ಲಿ ಕಾವೇರಿಕೊಳ್ಳದ ಜಲಾಶಯಗಳ ಪರಿಸ್ಥಿತಿ ಅವಲೋಕನ ನಡೆಸಿದ ಬಳಿಕ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ತಾಂತ್ರಿಕ ಸಮಿತಿ ಭಾನುವಾರ ತಮಿಳುನಾಡಿಗೆ ಭೇಟಿ ನೀಡಿತು.

ಝಾ ನೇತೃತ್ವದ ತಂಡವು ಕಾವೇರಿ ನದಿ ಮುಖಜ ಭೂಮಿಯಲ್ಲಿರುವ ಮೆಟ್ಟೂರು ಮತ್ತು ಭವಾನಿ ಸಾಗರ ಜಲಾಶಯಗಳಿಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿಯ ಕುರಿತು ಮಾಹಿತಿ ಕಲೆ ಹಾಕಿತು.

ಸೇಲಂ ಜಿಲ್ಲೆಯಲ್ಲಿರುವ ಮೆಟ್ಟೂರು ಜಲಾಶಯಕ್ಕೆ ಭೇಟಿ ನೀಡಿದ ತಂಡವು ಬಳಿಕ ಈರೋಡ್‌ ಜಿಲ್ಲೆಯ ಭವಾನಿಸಾಗರ ಜಲಾಶಯಕ್ಕೆ ಭೇಟಿ ನೀಡಿತು. ಎರಡೂ ಜಲಾಶಯಗಳ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರಹರಿವಿನ ಮಾಹಿತಿ ಪಡೆಯಿತು.

ADVERTISEMENT

ಇದೇ ಸಂದರ್ಭ ಕೇಂದ್ರ ತಂಡವು ರೈತ ಸಂಘಗಳ ಪ್ರತಿನಿಧಿಗಳು ಭೇಟಿ ಮಾಡಿ ಅಹವಾಲು ಸ್ವೀಕರಿಸಿತು ಹಾಗೂ ಸಾಂಬಾ ಬೆಳೆಯ ಕುಂದುಕೊರತೆಗಳ  ಬಗ್ಗೆ ರೈತರ ವಿಚಾರಣೆ ನಡೆಸಿತು.

ಮೆಟ್ಟೂರು ಜಲಾಶಯದಲ್ಲಿ ಈಗ ಸಂಗ್ರಹವಿರುವ ನೀರಿನ ಪ್ರಮಾಣವು ಸಾಂಬಾ ಬೆಳೆ ಸಾಗುವಳಿಗೆ ಸಾಲುವುದಿಲ್ಲ ಎಂದು ರೈತರು ಕೇಂದ್ರ ತಂಡದ ಗಮನಕ್ಕೆ ತಂದರು.

ಕೇಂದ್ರ ತಂಡದ ಭೇಟಿಗೂ ಮುನ್ನ, ಶುಕ್ರವಾರ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್‌ ಅವರು ಅಗತ್ಯ ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.  ಕರ್ನಾಟಕ ಕಾವೇರಿ ನೀರು ಬಿಡುಗಡೆ ಮಾಡಿರುವುದರಿಂದ ಮೆಟ್ಟೂರು ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಳೆದವಾರ ಒಳಹರಿವಿನ ಪ್ರಮಾಣ 600 ಕ್ಯುಸೆಕ್‌ ಇತ್ತು. ಈಗ  2,800 ಕ್ಯುಸೆಕ್‌ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.