ADVERTISEMENT

ತಮಿಳುನಾಡು: ಕಾಡ್ಗಿಚ್ಚಿನಲ್ಲಿ ಸಿಲುಕಿದ 36 ಚಾರಣಿಗರು

ಪಿಟಿಐ
Published 11 ಮಾರ್ಚ್ 2018, 19:57 IST
Last Updated 11 ಮಾರ್ಚ್ 2018, 19:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಥೇಣಿ: ಇಲ್ಲಿನ ಕುರಾಂಗಣಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ರಾತ್ರಿ ಬೃಹತ್ ಕಾಡ್ಗಿಚ್ಚು ಉಂಟಾಗಿದ್ದು, 36 ಮಂದಿ ಚಾರಣಿಗರು ಅದರಲ್ಲಿ ಸಿಲುಕಿದ್ದಾರೆ.

15 ಮಂದಿಯನ್ನು ರಕ್ಷಿಸಲಾಗಿದ್ದು, ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರ ಮನವಿ ಮೇರೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ.

‘ಕುರಾಂಗಣಿ ಬೆಟ್ಟದಲ್ಲಿ ವ್ಯಾಪಿಸಿರುವ ಕಾಡ್ಗಿಚ್ಚಿನಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಬೊದಿನಾಯಕಣುರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ರಾಜ್ಯ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಬೆಂಕಿಯಿಂದಾಗಿ ಕೆಲವರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಕೆಲವರು ಕರೆ ಮಾಡಿ ತಿಳಿಸಿದ್ದಾರೆ. ಇದುವರೆಗೂ ಯಾವುದೇ ಸಾವಿನ ಬಗ್ಗೆ ಖಚಿತಪಟ್ಟಿಲ್ಲ’ ಎಂದು ಥೇಣಿ ಜಿಲ್ಲಾಧಿಕಾರಿ ಮರಿಯಂ ಪಲ್ಲವಿ ಬಲದೇವ್ ತಿಳಿಸಿದ್ದಾರೆ.

‘ತಿರುಪುರ ಮತ್ತು ಈರೋಡ್‌ನ 12 ಮಂದಿಯ ಗುಂಪು, ಚೆನ್ನೈನ 24 ಮಂದಿಯ ಇನ್ನೊಂದು ಗುಂಪು ಶನಿವಾರ ಕುರಾಂಗಣಿ ಬೆಟ್ಟ ತಲುಪಿದೆ. ಅಲ್ಲಿಂದ ಹಿಂದಿರುಗುವಾಗ ಕಾಡ್ಗಿಚ್ಚಿನ ಸುದ್ದಿ ತಿಳಿದು ತಪ್ಪಿಸಿಕೊಳ್ಳುವ ಭರದಲ್ಲಿ ಬೇರೆ ಬೇರೆಯಾಗಿದ್ದಾರೆ’ ಎಂದು ಪಲ್ಲವಿ ಬಲದೇವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.