ADVERTISEMENT

ತಮಿಳುನಾಡು ಬಂದ್: ರಾಜ್ಯದ ಬಸ್‌ಗೆ ಕಲ್ಲು

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 11:12 IST
Last Updated 28 ಮಾರ್ಚ್ 2015, 11:12 IST

ಕೊಯಮತ್ತೂರು, ತಮಿಳುನಾಡು (ಪಿಟಿಐ): ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನಲ್ಲಿ ಶನಿವಾರ ನಡೆಯುತ್ತಿರುವ ಬಂದ್‌ಗೆ ಕೆಲ ಜಿಲ್ಲೆಗಳಲ್ಲಿ ಪ್ರತಿಕ್ರಿಯೆ ದೊರೆತಿದ್ದು, ಇನ್ನು ಕೆಲ ಜಿಲ್ಲೆಗಳಲ್ಲಿ ಜನ ಜೀವನ ಸಹಜ ಸ್ಥಿತಿಯಲ್ಲಿದೆ. ಬಂದ್ ವೇಳೆ ಕರ್ನಾಟಕದ ಬಸ್ ಒಂದರ ಮೇಲೆ ಕಲ್ಲು ತೂರಲಾಗಿದೆ.

ನೀಲಗಿರಿ ಜಿಲ್ಲೆಗೆ ಕರ್ನಾಟಕ, ಕೇರಳದಿಂದ ಪ್ರವಾಸಿಗರು ಆಗಮಿಸಿದ್ದಾರೆ. ಬಂದ್ ಗೆ ಕರೆ ನೀಡಿರುವುದರಿಂದ ಗಡಿ ದಾಟಿ ಒಳ ಪ್ರವೇಶಿಸದಂತೆ ಪ್ರತಿಭನಾಕಾರರು ವಾಹನಗಳನ್ನು ತಡೆದಿದ್ದಾರೆ. ಇದರಿಂದ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.

ಇದೇ ವೇಳೆ ಕುಡ್ಡಲೂರು ಜಿಲ್ಲೆಯಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ (ಕೆಎಸ್ ಆರ್ ಟಿಸಿ) ಬಸ್ ಒಂದರ ಮೇಲೆ ಕಲ್ಲು ತೂರಲಾಗಿದೆ. ಬಸ್ ನ ಕಿಟಕಿ ಗಾಜು ಹಾನಿಗೊಳಗಾಗಿದೆ. ನಂತರ ಬಸ್ ಸಂಚಾರವನ್ನು ನಿಲ್ಲಿಸುವಂತೆ ಸೂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂದ್ ಗೆ ಕರೆ ನೀಡಿರುವುದರಿಂದ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ತಮಿಳುನಾಡು ಸರ್ಕಾರ ಶನಿವಾರದ ಸದನದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದೆ. ಕೆಲವೆಡೆ ‘ರೈಲ್ ರೊಖೊ’ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊಯಮತ್ತೂರು, ನೀಲಗಿರಿ ಜಿಲ್ಲೆಗಳು ಬಹುತೇಕ ಬಂದ್ ಆಗಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ನೀಲಗಿರಿ ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಸರ್ಕಾರಿ, ಖಾಸಗಿ ಬಸ್, ಆಟೊರಿಕ್ಷಾ, ಟ್ಯಾಕ್ಸಿ ಸಂಚಾರ ಮೂರು ಜಿಲ್ಲೆಗಳಲ್ಲಿ ಬಂದ್ ಆಗಿದೆ. ತಿರುಪ್ಪೂರ್‌ನಲ್ಲಿ ಶೇ 90ರಷ್ಟು ಜವಳಿ ಕೈಗಾರಿಕೆಗಳು ಬಂದ್ ಆಗಿದ್ದು, ಸುಮಾರು ನಾಲ್ಕು ಲಕ್ಷ ಕಾರ್ಮಿಕರು ಕಾರ್ಖಾನೆಗಳಿಂದ ಹೊರಗುಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT