ADVERTISEMENT

ತಲಾಖ್: ಸಾಂವಿಧಾನಿಕ ಪರಿಶೀಲನೆ ಅಗತ್ಯ– ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ (ಪಿಟಿಐ):‘ಮೂರು ಬಾರಿ ತಲಾಖ್‌ ಹೇಳುವ ಮೂಲಕ ವಿಚ್ಛೇದನ ನೀಡುವ ಮುಸ್ಲಿಮರ ಪದ್ಧತಿಯನ್ನು ಸಂವಿಧಾನದ  ಒರೆಗೆ ಹಚ್ಚಿ ನೋಡಬೇಕು’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಸ್ಲಿಂ ವೈಯಕ್ತಿಕ ಕಾನೂನು ಕುರಿತ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌, ‘ಈ ವಿಚಾರದಲ್ಲಿ ತಕ್ಷಣವೇ ಯಾವ ತೀರ್ಮಾನಕ್ಕೂ ಬರಲು ಸಾಧ್ಯವಿಲ್ಲ. ಆದರೆ ಈ ವಿಚಾರ ಸಮಾಜದ ಹಲವು ಜನರ ಮೇಲೆ ಪ್ರಭಾವ ಬೀರುವ ಕಾರಣ ಇದನ್ನು ಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿದೆ.
ಮುಖ್ಯನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ ಮತ್ತು ಎ.ಎಂ. ಖಾನ್‌ವಿಲ್ಕರ್‌ ಅವರಿದ್ದ ಪೀಠ, ‘ಈ ವಿಚಾರ ಕುರಿತು ಈ ಹಿಂದೆ ಬಂದಿರುವ ಆದೇಶಗಳನ್ನು ಪರಿಶೀಲಿಸುತ್ತೇವೆ.

ಈ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ವ್ಯಾಪಕ ಚರ್ಚೆ ನಡೆಯಬೇಕಿದೆ. ಇದಕ್ಕೆ ವಾದಿ ಮತ್ತು ಪ್ರತಿವಾದಿಗಳೂ ಸಿದ್ಧರಿರಬೇಕು. ಜತೆಗೆ ಇದನ್ನು ಇನ್ನೂ ಹೆಚ್ಚಿನ ಸದಸ್ಯರಿರುವ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಬೇಕೆ ಎಂಬುದನ್ನು ಪರಿಶೀಲಿಸುತ್ತೇವೆ’ ಎಂದು ಹೇಳಿದೆ.
ತಲಾಖ್ ಮೂಲಕ ವಿಚ್ಚೇದನ ನೀಡುವ ಕುರಿತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರು ಮತ್ತು ಇತರರು ಟಿ.ವಿ ವಾಹಿನಿಗಳಲ್ಲಿ ನಡೆಸುತ್ತಿರುವ ಚರ್ಚೆಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ವಕೀಲೆ ಫರಾಹ್ ಫಯಾಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಹೀಗೆ ಹೇಳಿದೆ.

‘ಟಿ.ವಿ ವಾಹಿನಿಗಳಲ್ಲಿ ನಡೆಯುವ ಚರ್ಚೆಗಳಿಂದ ನಾವೇನು ಪ್ರಭಾವಿತರಾಗುವುದಿಲ್ಲ. ನೀವೂ ಸಹ ಅಂತಹ ಚರ್ಚೆಗಳಲ್ಲಿ ಭಾಗವಹಿಸಬಹುದು. ಚರ್ಚೆಗಳೇನಾದರೂ ಕೈಮೀರುವ ಪರಿಸ್ಥಿತಿ ಬಂದರೆ ಕೋರ್ಟ್ ಮಧ್ಯಪ್ರವೇಶಿಸುತ್ತದೆ’ ಎಂದು  ಪೀಠ ಹೇಳಿದೆ.

ಅರ್ಜಿಯ ವಿಚಾರಣೆಯನ್ನು ಪೀಠ ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ.ವೈಯಕ್ತಿಕ ಕಾನೂನಿನ ಬಗ್ಗೆ ತನ್ನ ನಿಲುವನ್ನು ತಿಳಿಸುವಂತೆ ಪೀಠ ಕೇಂದ್ರ ಸರ್ಕಾರಕ್ಕೆ ಈ ಹಿಂದೆಯೇ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.