ADVERTISEMENT

ದಾಖಲೆ: ಶಂಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2014, 19:30 IST
Last Updated 5 ಸೆಪ್ಟೆಂಬರ್ 2014, 19:30 IST

ನವದೆಹಲಿ: ಸಂದರ್ಶಕರ ಪುಸ್ತಕದಲ್ಲಿ­ರುವ ಅಂಶಗಳ ಗೊಂದಲ  ಬಗೆಹರಿ­ಯುವ ಮೊದಲೇ ಸ್ವಸಮರ್ಥನೆಗೆ ಮುಂದಾ­ಗಿರುವ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ, ಸಂದರ್ಶಕರ ಪುಸ್ತಕದ­ಲ್ಲಿರುವ ದಾಖಲಾಗಿರುವ ಅಂಶಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನಿಸಿದ್ದಾರೆ.

ಸಂದರ್ಶಕರ ಪುಸ್ತಕದಲ್ಲಿ ದಾಖಲಾಗಿ­ರು­ವಂತೆ ಕೆಲವರನ್ನು  ಭೇಟಿಯಾಗಿ­ರು­ವುದು ನಿಜ ಎಂದು  ಅವರು ಇದೇ ವೇಳೆ ಒಪ್ಪಿಕೊಂಡಿದ್ದಾರೆ. ‘ಕಳ್ಳರನ್ನು ಬಳಸಿ­ಕೊಂಡೇ ಕಳ್ಳರಿಗೆ ಬಲೆ ಹಾಕುವ ಉದ್ದೇ­ಶ­ದಿಂದ ನಾನು ಅನೇಕರನ್ನು ಭೇಟಿ ಮಾಡಿದ್ದು ನಿಜ’ ಎಂದು ಅವರು  ಸಮ­ರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಪ್ರಧಾನಿಗೆ ಪತ್ರ: ರಂಜಿತ್ ಸಿನ್ಹಾ ಅವ­ರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿ­ಸು­ವಂತೆ ಕೋರಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ. 

‘2ಜಿ ಮತ್ತು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಅವ್ಯವಹಾರ ಹಗರಣದ ಕೆಲವು ಆರೋಪಿಗಳನ್ನು ತಾವು ಭೇಟಿಯಾಗಿರ­ಬಹುದು. ಹಾಗಂತ ಸಿಬಿಐ ನಿಲುವು ಮತ್ತು ತನಿಖೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಂಡಿಲ್ಲ. ಆರೋಪಿಗಳ ರಕ್ಷಣೆಗೆ ಮುಂದಾಗಿಲ್ಲ’ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಮೇ 2013ರಿಂದ ಆಗಸ್ಟ್ 2014ರ ನಡುವೆ ಅಂಬಾನಿ ಸಮೂಹ ಸಂಸ್ಥೆ ಅಧಿಕಾರಿಗಳು, ಕಾರ್ಪೋರೇಟ್‌ ದಲ್ಲಾಳಿ ತಲ್ವಾರ್, ತೃಣಮೂಲ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್ ಸಂಸದ  ಸೇರಿದಂತೆ ಅನೇಕರು ಹಲವಾರು ಬಾರಿ ಭೇಟಿಯಾಗಿರುವುದು ಶಂಕೆ ಎಡೆ ಮಾಡಿಕೊಟ್ಟಿದೆ.

ಸಿನ್ಹಾ ಅವರ 2 ಜನಪಥ್‌ ನಿವಾಸದ ಸಂದರ್ಶಕರ 300 ಪುಟಗಳ ಪುಸ್ತಕದಲ್ಲಿರುವ ರಾಜಕೀಯ ಮತ್ತು ಕಾರ್ಪೊರೇಟ್‌ ದಿಗ್ಗಜರ ಹೆಸರಿನ ಜತೆಗೆ  ಶಿವ ಬಾಬಾ, ಶೈಲೇಶ್, ಗುಪ್ತಾಜಿ ಮತ್ತು ದಾಸ್ ವಿಚಿತ್ರ ಹೆಸರುಗಳು ಕುತೂಹಲ ಕೆರಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.