ADVERTISEMENT

ದೆಹಲಿ ಸರ್ಕಾರ ಸಾಧ್ಯತೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:33 IST
Last Updated 29 ಅಕ್ಟೋಬರ್ 2014, 19:33 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ದೆಹಲಿಯಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರು­ವುದಕ್ಕೆ ಸುಪ್ರೀಂ­ಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲಿಯೇ ಲೆಫ್ಟಿನೆಂಟ್‌ ಗವರ್ನರ್‌್ ನಜೀಬ್‌ ಜಂಗ್‌ ಅವರು ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ.
ಸರ್ಕಾರ ರಚನೆ ಸಾಧ್ಯತೆ ಪರಿಶೀಲಿ­ಸುವಂತೆ ರಾಜಕೀಯ ಪಕ್ಷಗಳಿಗೆ ಕರೆ ನೀಡುವುದಾಗಿ  ಅವರು ಬುಧವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಮಂಗಳವಾರ ರಾತ್ರಿಯಷ್ಟೇ ವಿದೇಶದಿಂದ ಮರಳಿ­ರುವ ಜಂಗ್‌,  ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿ­ದರು.  ದೆಹಲಿಯಲ್ಲಿ ರಾಜಕೀಯ ಅನಿಶ್ಚಿತತೆಗೆ ತೆರೆ ಎಳೆಯಲು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸುವ ತಮ್ಮ ನಿರ್ಧಾರವನ್ನು ಸಚಿವರಿಗೆ ತಿಳಿಸಿದರು.

ಜಂಗ್‌ ಅವರು ಸರ್ಕಾರ ರಚನೆ ವಿಷಯದಲ್ಲಿ ಆದಷ್ಟು ಶೀಘ್ರವೇ ಬಿಜೆಪಿ, ಎಎಪಿ ಹಾಗೂ ಕಾಂಗ್ರೆಸ್‌ ಅಭಿಪ್ರಾಯ ಕೇಳುವ ಸಾಧ್ಯತೆ ಇದೆ. ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿರುವುದರಿಂದ ಆ ಪಕ್ಷದ ಅನಿಸಿಕೆ­ಯನ್ನೇ ಮೊದಲು ಕೇಳಲಾಗುತ್ತದೆ ಎಂದು ಲೆಫ್ಟಿನೆಂಟ್‌ ಗವರ್ನರ್‌್ ಕಚೇರಿ ಮೂಲಗಳು ಹೇಳಿವೆ.

ದೆಹಲಿಯಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡುವ ಲೆಫ್ಟಿನೆಂಟ್‌ ಗವರ್ನರ್‌್ ಪ್ರಸ್ತಾವನೆ­ಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಒಪ್ಪಿಕೊಂಡಿರು­ವುದಾಗಿ ಕೇಂದ್ರವು ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.  ದೆಹಲಿ ವಿಧಾನ­ಸಭೆ ವಿಸರ್ಜಿಸುವಂತೆ ಕೋರಿ ಆಮ್‌ ಆದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ಗುರುವಾರ ನಡೆಯಲಿದೆ. ದೆಹಲಿಯಲ್ಲಿ  ಸರ್ಕಾರ ರಚಿಸುವುದಕ್ಕೆ ಪಕ್ಷದ ಅಧ್ಯಕ್ಷ ಅಮಿತ್‌ ಷಾ, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ ಹಾಗೂ ರಾಜನಾಥ್‌ ಸಿಂಗ್‌ ಅವರು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೂ ಬಿಜೆಪಿ ಈ ವಿಷಯವಾಗಿ ಇನ್ನೂ ನಿರ್ಧಾರಕ್ಕೆ ಬಂದಿಲ್ಲ.

ಎಎಪಿ ಆಗ್ರಹ: ಈ ನಡುವೆ ಆಮ್‌ ಆದ್ಮಿ ಪಕ್ಷ ದೆಹಲಿಯಲ್ಲಿ ಸರ್ಕಾರ ರಚನೆ ಸಂಬಂಧ ಲೆಫ್ಟಿನೆಂಟ್‌ ಗವರ್ನರ್‌್ ಅವರು ತಕ್ಷಣವೇ ಸರ್ವ ಪಕ್ಷ ಸಭೆ ಕರೆಯುವಂತೆ ಆಗ್ರಹಿಸಿದೆ. ಅಲ್ಲದೇ ಅಂತಿಮ ನಿರ್ಧಾರವನ್ನು ಗುರುವಾರ ಸುಪ್ರೀಂಕೋರ್ಟ್‌ಗೆ ತಿಳಿಸುವಂತೆಯೂ ಪಟ್ಟು ಹಿಡಿದಿದೆ. ಜಂಗ್‌ ಅವರನ್ನು ‘ಬಿಜೆಪಿ ಏಜೆಂಟ್‌’ ಎಂದು ಮೂದ­ಲಿಸಿರುವ ಪಕ್ಷ, ಸುಪ್ರೀಂ­ಕೋರ್ಟ್‌ನಲ್ಲಿ ಗುರು­ವಾರ ನಡೆಯ­ಲಿರುವ ವಿಚಾರಣೆ ತಪ್ಪಿಸಿಕೊಳ್ಳುವುದು ಜಂಗ್‌ ಉದ್ದೇಶ ಎಂದೂ ಟೀಕಿಸಿದೆ.

ವಿಧಾನಸಭೆಗೆ ಮರು ಚುನಾವಣೆ ಸಾಧ್ಯತೆ
ಸದ್ಯದ ಸನ್ನಿವೇಶದಲ್ಲಿ ದೆಹಲಿಯಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು ಮುಂದೆ ಬರದಿದ್ದರೆ ಕೇಂದ್ರವು ಅಲ್ಲಿ ಹೊಸದಾಗಿ ಚುನಾವಣೆ ನಡೆಸದೇ ಅನ್ಯ ಮಾರ್ಗವಿಲ್ಲ. ದೆಹಲಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿ ಲೆಫ್ಟಿನೆಂಟ್‌ ಗವರ್ನರ್‌್ ನಜೀಬ್‌ ಜಂಗ್‌್ ಸಲಹೆಯನ್ನು ಗೃಹ ಸಚಿವಾಲಯ ಎದುರು ನೋಡುವುದಾಗಿ ಸರ್ಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸರ್ಕಾರ ರಚನೆ ಆಗದಿದ್ದರೆ ನಮಗೆ ಚುನಾವಣೆ ನಡೆಸದೇ ಬೇರೆ ದಾರಿ ಇಲ್ಲ.  ಲೆ.ಗವರ್ನರ್‌್ ಸಲಹೆ ಮೇರೆಗೆ ನಾವು ಆದಷ್ಟು ಶೀಘ್ರ ನಿರ್ಧಾರ ತೆಗೆದು­ಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ. ಎನ್‌ಡಿಎ ಸರ್ಕಾರವಾಗಲೀ, ಬಿಜೆಪಿಯಾಗಲೀ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ‘ಕಳಂಕ’ ತರುವ ಪ್ರಜಾತಂತ್ರ ವಿರೋಧಿ ಪ್ರಯತ್ನ ಮಾಡಲು ತಯಾರಿಲ್ಲ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT