ADVERTISEMENT

ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿ.ಎಂ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 12:01 IST
Last Updated 31 ಅಕ್ಟೋಬರ್ 2014, 12:01 IST

ಮುಂಬೈ (ಪಿಟಿಐ): ದೇವೇಂದ್ರ ಫಡ್ನವೀಸ್‌ (44)  ಮಹಾರಾಷ್ಟ್ರದ 27ನೇ ಮುಖ್ಯಮಂತ್ರಿಯಾಗಿ ಇಂದು (ಶುಕ್ರವಾರ) ಪ್ರಮಾಣ ವಚನ ಸ್ವೀಕರಿಸಿದರು.

ವಾಂಖೆಡೆ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸುಮಾರು 40 ಸಾವಿರ ಅತಿಥಿಗಳ ಸಮ್ಮುಖದಲ್ಲಿ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್‌ ಅವರು ಫಡ್ನವೀಸ್‌ ಅವರಿಗೆ ಪ್ರಮಾಣವಚನ ಬೋಧಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಪಕ್ಷದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಪ್ರಮುಖರು ಸಮಾರಂಭಕ್ಕೆ ಸಾಕ್ಷಿಯಾದರು.

ಫಡ್ನವೀಸ್‌ ಮಹಾರಾಷ್ಟ್ರದ ಮೊದಲ ಬಿಜೆಪಿ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶುಕ್ರವಾರ ಅವರ ಜತೆ ಚಿಕ್ಕದೊಂದು ತಂಡ ಮಾತ್ರ ಪ್ರಮಾಣ ವಚನ ಸ್ವೀಕರಿಸಿತು. ನಿಧಾನವಾಗಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹಿರಿಯ ಬಿಜೆಪಿ ಮುಖಂಡ ರಾಜೀವ್‌ ಪ್ರತಾಪ್ ರುದೈ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ವಿನೋದ್‌ ತಾವ್ಡೆ, ಪಂಕಜ್‌ ಮುಂಡೆ, ಏಕನಾಥ್‌ ಖಡ್ಸೆ, ಸುಧೀರ್‌ ಮುಂಗಂತಿವಾರ್‌, ಪ್ರಕಾಶ್‌ ಮೆಹ್ತಾ, ವಿಷ್ಣುಸ್ವಾರ ಹಾಗೂ ಚಂದ್ರಕಾಂತ್‌ ಪಟೇಲ್‌ ಫಡ್ನವೀಸ್‌ ಜತೆ ಪ್ರಮಾಣ ವಚನ ಸ್ವೀಕರಿಸಿದರು.

ಮುನಿಸು ಮರೆತು ಮೈತ್ರಿ: ದೇವೇಂದ್ರ ಫಡ್ನವೀಸ್‌ ಪ್ರಮಾಣ ವಚನ ಸಮಾರಂಭಕ್ಕೆ ಬಹಿಷ್ಕಾರ ಹಾಕಿದ್ದ ಶಿವಸೇನೆ, ಕೊನೆಗೂ ಅಮಿತ್‌ ಷಾ ಅವರ ಮನವೊಲಿಕೆಗೆ ಮಣಿದಿದೆ. 

ಅಮಿತ್‌ ಷಾ ಅವರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಹಿನ್ನೆಲೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

‘ಬಿಜೆಪಿ ಜತೆ ಸಂಭವನೀಯ ಮರು ಮೈತ್ರಿಯ ಬಗ್ಗೆ  ಚರ್ಚೆ ನಡೆಯುತ್ತಿದ್ದರೂ ಇನ್ನೂ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ. ಇದಲ್ಲದೆ, ಬಿಜೆಪಿಯಿಂದ ಪಕ್ಷಕ್ಕೆ ಪದೇ ಪದೇ ಅವಮಾನವಾಗುತ್ತಿದೆ. ಹೀಗಾಗಿ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸುತ್ತಿದ್ದೇವೆ’ ಎಂದು ಶಿವಸೇನೆ ಸಂಸದ ವಿನಾಯಕ್‌ ರಾವುತ್‌ ಗುರುವಾರ ರಾತ್ರಿ ಹೇಳಿದ್ದರು.

‘ಶಿವಸೇನೆಯ ಯಾವೊಬ್ಬ ಶಾಸಕರು  ಶುಕ್ರವಾರ ನಡೆಯುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ’ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಸ್ಪಷ್ಟಪಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.