ADVERTISEMENT

ದೇಶದ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌

ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ

ಏಜೆನ್ಸೀಸ್
Published 26 ಏಪ್ರಿಲ್ 2018, 11:45 IST
Last Updated 26 ಏಪ್ರಿಲ್ 2018, 11:45 IST
ಸಿನಿಮಾ ದೃಶ್ಯವೊಂದರಲ್ಲಿ ಸಲ್ಮಾನ್‌ ಖಾನ್‌
ಸಿನಿಮಾ ದೃಶ್ಯವೊಂದರಲ್ಲಿ ಸಲ್ಮಾನ್‌ ಖಾನ್‌   

ಡೆಹ‌್ರಾಡೂನ್‌: ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದೇಶದ ಪ್ರಮುಖ 39 ಮಂದಿ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಹುಲಿ ಬೇಟೆ, ಇತರ ಪ್ರಾಣಿಗಳ ದೇಹಗಳ ಕಳ್ಳಸಾಗಾಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾದ 38 ಪ್ರಮುಖ ಅಪರಾಧಿಗಳ ನಂತರ ಸಲ್ಮಾನ್‌ ಖಾನ್‌ ಹೆಸರಿದೆ.

ಈ ಬಗ್ಗೆ ಮಾತನಾಡಿರುವ ಮಂಡಳಿಯ ಹೆಚ್ಚುವರಿ ನಿರ್ದೇಶಕ ತಿಲೋತ್ತಮ ವರ್ಮಾ, ‘ಈ ಹಿಂದೆ ನಡೆದಿರುವ ಹಾಗೂ ಸದ್ಯದ ವನ್ಯಜೀವಿ ಅಪರಾಧ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸುವ ಸಲುವಾಗಿ ದಾಖಲೆ ಬಿಡುಗಡೆ ಮಾಡಲಾಗಿದೆ. ಇದು ಅಪರಾಧಿಗಳ ಚಲನವಲನದ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಹೆಸರುಗಳನ್ನು ಬಹಿರಂಗಪಡಿಸಿರುವುದರಿಂದ ಅಧಿಕಾರಿಗಳು ಹಾಗೂ ಜನರಿಗೆ ಅಪರಾಧಿಗಳ ಬಗ್ಗೆ ಕನಿಷ್ಠ ಮಾಹಿತಿ ದೊರೆಯುತ್ತದೆ. ಇದರಿಂದಾಗಿ ಅಪರಾಧಿಗಳ ಸಾರ್ವಜನಿಕ ವ್ಯವಹಾರಗಳ ಮೇಲೆ ನಿಗಾವಹಿಸಿದಂತಾಗುತ್ತದೆ. ಇಂತಹ ವಿಚಾರಗಳಲ್ಲಿ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದ್ದು, ಸರ್ಕಾರ ನಿಗಾವಹಿಸಲು ಅನುಕೂಲವಾಗಲಿದೆ’ ಎಂದು ಅರಣ್ಯ ಮತ್ತು ಪರಿಸರ ಸಚಿವಾಲಯದ ಮಾಜಿ ಮಹಾನಿರ್ದೇಶಕ ಎಸ್‌.ಎಸ್‌. ನೇಗಿ ಹೇಳಿದ್ದಾರೆ.

1998ರ ಅಕ್ಟೋಬರ್‌ನಲ್ಲಿ ರಾಜಸ್ಥಾನದ ಜೋಧಪುರ ಸಮೀಪದ ಹಳ್ಳಿಯಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್‌ ದೋಷಿ ಎಂದಿದ್ದ ನ್ಯಾಯಾಲಯ, ಏಪ್ರಿಲ್‌ 5 ರಂದು ಐದು ವರ್ಷಗಳ ಜೈಲು ಶಿಕ್ಷೆ ಮತ್ತು  ₹10 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು.

ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಎರಡು ದಿನ ಸೆರೆವಾಸದಲ್ಲಿದ್ದ ಸಲ್ಮಾನ್‌ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರಕರಣದ ಮುಂದಿನ ವಿಚಾರಣೆ ಮೇ 07 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.