ADVERTISEMENT

‘ದ್ವೀಪ ರಾಷ್ಟ್ರಗಳ ರಕ್ಷಿಸುವ ಸಾಮರ್ಥ್ಯ ಇದೆ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಸುನಿಲ್‌ ಲಾಂಬಾ
ಸುನಿಲ್‌ ಲಾಂಬಾ   

ಹೈದರಾಬಾದ್‌: ‘ಹಿಂದೂ ಮಹಾಸಾಗರದಲ್ಲಿ ದೇಶದ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಪಾಲುದಾರ ರಾಷ್ಟ್ರಗಳನ್ನೂ ರಕ್ಷಿಸುವ ಸಾಮರ್ಥ್ಯ ಭಾರತಕ್ಕೆ ಇದೆ’ ಎಂದು ಭಾರತೀಯ ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ ಹೇಳಿದರು.

ಆ ಮೂಲಕ, ಹಿಂದೂ ಮಹಾಸಾಗರದಲ್ಲಿ ಚೀನಾದ ಉಪಸ್ಥಿತಿ ಹೆಚ್ಚಾಗುತ್ತಿದೆ ಎಂಬ ಬಗ್ಗೆ ಸೃಷ್ಟಿಯಾಗಿರುವ ಆತಂಕವನ್ನು ದೂರ ಮಾಡಲು ಅವರು ಯತ್ನಿಸಿದರು.

ದುಂಡಿಗಲ್‌ನ ವಾಯು ಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ಜಂಟಿ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದೂ ಮಹಾಸಾಗರ ಎಷ್ಟು ದೊಡ್ಡದಿದೆ ಎಂದರೆ, ಚೀನಾ ಮಾತ್ರ ಅಲ್ಲ; ಅಮೆರಿಕಕ್ಕೂ ಅದರ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ. ಆದರೆ, ನಮಗೆ ಅಲ್ಲಿ ನಮ್ಮ ಪಾಲುದಾರರಿದ್ದಾರೆ, ಪರಸ್ಪರ ಸಹಕಾರ ನೀಡುವ ವ್ಯವಸ್ಥೆ ಇದೆ. ಮಾಧ್ಯಮಗಳು ಅಲ್ಲಿ ಚೀನಾದ ಉಪಸ್ಥಿತಿ ಬಗ್ಗೆ ಅತಿಯಾಗಿ ಪ್ರಾಮುಖ್ಯ ಕೊಡುತ್ತಿವೆ. ಯಾವುದೇ ಸಮಯದಲ್ಲಿ ಚೀನಾದ ನಾಲ್ಕು ಅಥವಾ ಐದು ಯುದ್ಧ ನೌಕೆಗಳು ಮತ್ತು ಮೂರರಿಂದ ನಾಲ್ಕು ಅಧ್ಯಯನ ನೌಕೆಗಳು ಹಿಂದೂ ಮಹಾ ಸಾಗರದಲ್ಲಿ ಇರಬಹುದು’ ಎಂದು ಹೇಳಿದರು.

ADVERTISEMENT

‘ಸದ್ಯಕ್ಕೆ ಯಾವುದೇ ಯುದ್ಧ ನಡೆಯುವ ಸಂಭವ ಇಲ್ಲ’

‘ಸದ್ಯಕ್ಕೆ ಯಾವುದೇ ಯುದ್ಧ ನಡೆಯುವ ಸಂಭವ ಇಲ್ಲ’ ಎಂದು ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಮ್ಮ ಪಡೆಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿವೆ. ಬಾಹ್ಯ ಅಥವಾ ಆಂತರಿಕವಾಗಿ ಎದುರಾಗುವ ಭದ್ರತಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವೂ ನಮಗಿದೆ. ಆ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇವೆ’ ಎಂದರು.

ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾ ಪಡೆ ಹೊಂದಿರುವ ಪ್ರಾಬಲ್ಯವನ್ನು ವಿವರಿಸಿದ ಅವರು, ನೌಕಾ ಪಡೆ ಬಳಿ ಸದ್ಯ 238 ಯುದ್ಧ ವಿಮಾನಗಳು ಇದ್ದು, ಒಂದು ದಶಕದ ಅವಧಿಯಲ್ಲಿ ಇವುಗಳ ಸಂಖ್ಯೆ 500ಕ್ಕೆ ಏರಲಿದೆ ಎಂದು ಅವರು ಹೇಳಿದರು.

‘ಈ ಸಾಗರದಲ್ಲಿ ನಮ್ಮ ನೌಕಾ ಪಡೆಯೇ ಅತ್ಯಂತ ದೊಡ್ಡ ರಕ್ಷಣಾ ಪಡೆ. ಅಲ್ಲಿರುವ ದ್ವೀಪ ರಾಷ್ಟ್ರಗಳಿಗೂ ರಕ್ಷಣೆ ಒದಗಿಸುವ ವ್ಯವಸ್ಥೆ ರೂಪಿಸಲು ಯೋಜನೆ ಹಾಕಿಕೊಂಡಿದ್ದೇವೆ. ನಮ್ಮ ಪಾಲುದಾರರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಈಗಾಗಲೇ ವಿಶೇಷ ಆರ್ಥಿಕ ವಲಯಗಳು ಮತ್ತು ದ್ವೀಪ ರಾಷ್ಟ್ರಗಳಿಗೆ ರಕ್ಷಣೆಯನ್ನು ನೀಡುತ್ತಿದ್ದೇವೆ’ ಎಂದು ಲಾಂಬಾ ವಿವರಿಸಿದರು.

ಸಿಶೆಲ್ಸ್‌ನ ಅಸ್ಯುಂಪ್ಷನ್‌ ದ್ವೀಪದಲ್ಲಿ ಭಾರತದ ನೌಕಾ ನೆಲೆ ಅಭಿವೃದ್ಧಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

105 ವಾಯುಪಡೆ ಕೆಡೆಟ್‌ಗಳಿಗೆ ಪದವಿ
ಹೈದರಾಬಾದ್‌:
ವಾಯುಪಡೆ ಅಕಾಡೆಮಿಯಲ್ಲಿ (ಎಎಫ್‌ಎ) ಮೂಲ ಮತ್ತು ವೃತ್ತಿ ಪರ ತರಬೇತಿ ಪೂರ್ಣಗೊಳಿಸಿದ 105 ವಾಯುಪಡೆ ಕೆಡೆಟ್‌ಗಳಿಗೆ ಶನಿವಾರ ಪದವಿ ಪ್ರದಾನ ಮಾಡಲಾಯಿತು. ಆ ಮೂಲಕ, ಇವರೆಲ್ಲ ಭಾರತೀಯ ವಾಯುಪಡೆಯ ಅಧಿಕಾರಿಗಳಾದರು.

ನಗರದ ದುಂಡಿಗಲ್‌ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಜಂಟಿ ಪದವಿ ಪಥಸಂಚಲನ ಸಮಾರಂಭದಲ್ಲಿ ವಾಯುಪಡೆ ಕೆಡೆಟ್‌ಗಳ ಜೊತೆ ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯ 14 ಅಧಿಕಾರಿಗಳಿಗೂ ಪದವಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.