ADVERTISEMENT

ಧರ್ಮ (ಪ್ರೀತಿ) ಸಂಕಟ

ಅಂತರಧರ್ಮೀಯ ವಿವಾಹಕ್ಕೆ ತಗಾದೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2016, 9:29 IST
Last Updated 1 ಡಿಸೆಂಬರ್ 2016, 9:29 IST
ಧರ್ಮ (ಪ್ರೀತಿ) ಸಂಕಟ
ಧರ್ಮ (ಪ್ರೀತಿ) ಸಂಕಟ   

ಮೀರಠ್‌: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ರ‍್ಯಾಂಕ್‌ ಪಡೆದಿದ್ದ ಟೀನಾ ಡಾಬಿ ಮತ್ತು  ಅಥರ್ ಅಮೀರುಲ್ ಶಫಿ ಖಾನ್‌ ಅವರ ಅಂತರಧರ್ಮೀಯ ವಿವಾಹಕ್ಕೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಟೀನಾ ಪೋಷಕರಿಗೆ, ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುನ್ನಾ ಕುಮಾರ್ ಶರ್ಮಾ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ‘ಈ ವಿವಾಹವನ್ನು ತಕ್ಷಣವೇ ರದ್ದುಪಡಿಸಬೇಕು. ಇಲ್ಲವೇ ಅಮೀರುಲ್‌ ಹಿಂದೂ ಧರ್ಮಕ್ಕೆ ಮತಾಂತರವಾದ ನಂತರ ವಿವಾಹ ನೆರವೇರಿಸಿ’ ಎಂದು ಸೂಚನೆ ನೀಡಿದ್ದಾರೆ.

‘ಈ ಅಂತರಧರ್ಮೀಯ ವಿವಾಹಕ್ಕೆ  ನಿಮ್ಮ ಕುಟುಂಬ ಮುಂದಾಗಿರುವುದರಿಂದ ಲವ್‌ ಜಿಹಾದ್‌ಗೆ ಉತ್ತೇಜನ ಸಿಕ್ಕಂತಾಗುತ್ತದೆ. ಒಂದೊಮ್ಮೆ ಅಮೀರುಲ್‌ ಹಿಂದೂ ಧರ್ಮಕ್ಕೆ ಮತಾಂತರವಾಗದಿದ್ದರೆ ಈ ವಿವಾಹ ನಡೆಯಲು ಬಿಡುವುದಿಲ್ಲ’ ಎಂದು ಶರ್ಮಾ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ.

ADVERTISEMENT

‘ಮತಾಂತರದ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮತಾಂತರ ಅಥವಾ ಘರ್‌ ವಾಪಸಿ ವಿಚಾರದಲ್ಲಿ ನಮ್ಮ ಸದಸ್ಯರು ನಿಮಗೆ ನೆರವಾಗಲಿದ್ದಾರೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟೀನಾ ಮೊದಲ ರ‍್ಯಾಂಕ್‌ ಬಂದಾಗ ನಾವೆಲ್ಲರೂ ಸಂಭ್ರಮಿಸಿದ್ದೆವು. ಆದರೆ ಆಕೆ ಮುಸಲ್ಮಾನನೊಬ್ಬನನ್ನು ಮದುವೆ ಆಗುವುದಾಗಿ ಘೋಷಿಸಿದಾಗ ನಮಗೆಲ್ಲರಿಗೂ ಆಘಾತವಾಯಿತು. ಮುಸ್ಲಿಮರು ಐಎಎಸ್‌ ಅಧಿಕಾರಿಗಳ ಮಟ್ಟದಲ್ಲೂ ಲವ್‌ ಜಿಹಾದ್ ಮಾಡಲು ಹೊರಟಿದ್ದಾರೆ. ಇದನ್ನು ತಪ್ಪಿಸಬೇಕು. ಒಂದೊಮ್ಮೆ ಅವರಿಬ್ಬರು ಮದುವೆ ಆಗಲೇಬೇಕೆಂದಿದ್ದರೆ ಅಮೀರುಲ್‌ ಅವರ ಘರ್‌ ವಾಪಸಿ ಆಗಲೇಬೇಕು ಎಂಬುದನ್ನು ನಾವು ಮತ್ತೊಮ್ಮೆ ಹೇಳುತ್ತಿದ್ದೇವೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಹಿಂದೂ ಮಹಾಸಭಾದ ಆಕ್ಷೇಪವನ್ನು ಟೀನಾ ಡಾಬಿ ನಯವಾಗಿ ತಿರಸ್ಕರಿಸಿದ್ದಾರೆ. ‘ಇದು ನನ್ನ ಆಯ್ಕೆ. ನನ್ನ ಆಯ್ಕೆ ಬಗ್ಗೆ ನನ್ನ ಪೋಷಕರು ಮತ್ತು ನಾನು ಸಂತೋಷವಾಗಿದ್ದೇವೆ. ಅಂತರಧರ್ಮೀಯ ವಿವಾಹಗಳ ಬಗ್ಗೆ ತಗಾದೆ ತೆಗೆಯುವವರು ಅಲ್ಲಿಇಲ್ಲಿ ಇದ್ದೇ ಇರುತ್ತಾರೆ’ ಎಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಟೀನಾ ಬರೆದುಕೊಂಡಿದ್ದಾರೆ.

2015ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟೀನಾ ಮತ್ತು ಅಮೀರುಲ್‌ ಕ್ರಮವಾಗಿ ಮೊದಲನೇ ಮತ್ತು ಎರಡನೇ ರ‍್ಯಾಂಕ್‌ ಪಡೆದಿದ್ದರು. ‘ನಾವಿಬ್ಬರು ಮದುವೆ ಆಗಲು ನಿರ್ಧರಿಸಿದ್ದೇವೆ’ ಎಂದು ಟೀನಾ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಹಿಂದೂ ಮಹಾಸಬಾ ಬರೆದಿರುವ ಪತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರ ಜತೆಯಲ್ಲೇ ಟೀನಾ ಅವರ ನಿರ್ಧಾರದ ಬಗ್ಗೆಯೂ ಆಕ್ಷೇಪ, ಆಕ್ರೋಶ ವ್ಯಕ್ತವಾಗಿದೆ.

* ಟೀನಾ ಮತ್ತು ಅಮೀರುಲ್ ವಿವಾಹ ವಿವಾದದ ವಿಡಿಯೊ ನೋಡಲು ನಿಮ್ಮ ಮೊಬೈಲ್‌ನಿಂದ ಕೋಡ್‌ ಸ್ಕ್ಯಾನ್ ಮಾಡಿ. ಗೂಗಲ್ ಪ್ಲೆ ಸ್ಟೋರ್‌ನಿಂದ ಐನಿಗ್ಮಾ ಅಥವಾ ಯಾವುದಾದರೂ ಕೋಡ್ ಸ್ಕ್ಯಾನರ್‌ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸ್ಕ್ಯಾನ್‌ ಮಾಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.