ADVERTISEMENT

ನರಕ ಸದೃಶ್ಯವಾಗಿ ಕಾಡಿದ ಸೌಂದರ್ಯದ ಗಣಿ ಕಾಶ್ಮೀರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 19:49 IST
Last Updated 11 ಸೆಪ್ಟೆಂಬರ್ 2014, 19:49 IST

ನವದೆಹಲಿ: ಅದು ಅವರ ಜೀವಮಾನದ ಪ್ರವಾಸ. ಬಹಳ ವರ್ಷ­ಗಳಿಂದ ಕಂಡಿದ್ದ ಕನಸನ್ನು ಸಾಕಾರಗೊಳಿ­ಸಲು ರೂಪಿಸಿದ್ದ ಕಾರ್ಯ­ಕ್ರಮ. ಕಣಿವೆ, ಗಿರಿ– ಕಂದರ, ನದಿ–ಝರಿಗಳು, ಕಣ್ಣುಮುಚ್ಚಾಲೆ ಆಡುವ ಮಂಜು– ಮೋಡದ ರಮಣೀಯ ದೃಶ್ಯಗಳನ್ನು ಅನುಭವಿ­ಸುವ ಅದಮ್ಯ ಉತ್ಸಾಹ ಹೊಂದಿದ್ದ ಬೆಂಗಳೂರಿನ ಕುಟುಂಬಕ್ಕೆ ಸೌಂದರ್ಯ ಗಣಿ ಕಾಶ್ಮೀರ ನರಕವಾಗಿ ಕಾಡಿತು.

ನಿಸರ್ಗದ ಮಡಿಲಲ್ಲಿ ನಾಲ್ಕು ದಿನ ಆರಾಮಾಗಿ ಕಳೆಯುವ ಬಯಕೆ ಹೊತ್ತಿದ್ದ 20ಜನರ ತಂಡಕ್ಕೆ ಒಂದು ಕ್ಷಣ ಸಾವಿನ ಭಯ ಕಾಡಿತು. ಬೆಂಗಳೂರು ಬಸವೇಶ್ವರ ನಗರದ ‘ಬ್ರಿಟಿಷ್ ಒರಿಯಂಟ್‌ ಕಂಪೆನಿ’ ವ್ಯವಸ್ಥಾಪಕ ನಿರ್ದೇಶಕ ಗಿರೀಶ್‌ ಹಾಗೂ ಅವರ ಪತ್ನಿ ಸುನಿತಾ ಗಿರೀಶ್‌ ತಮ್ಮ ಬಂಧು– ಬಳಗದ ಜತೆ ಕಾಶ್ಮೀರ ಪ್ರವಾಸ ಹೋಗಿದ್ದರು. ಎರಡೇ ದಿನದಲ್ಲಿ ಅವರ ಎಲ್ಲ ಯೋಜ­ನೆ­ಗಳು ತಲೆ­ಕೆಳಗಾದವು. ಅನಿರೀಕ್ಷಿತವಾಗಿ ಎದು­ರಾದ ಪ್ರವಾಹ­ದಿಂದ ಪಾರಾಗಿ ವಾಪಸ್‌ ಹೋದರೆ ಸಾಕೆನ್ನುವ ಆತಂಕ ಅವರಿಗೆ ಎದುರಾಗಿತ್ತು.

ಕಾಶ್ಮೀರದಿಂದ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ದೆಹ­ಲಿಗೆ ಬಂದು ತಂಗಿದ್ದ ಗಿರೀಶ್‌ ಮತ್ತು ಸುನಿತಾ ತಾವು ಅನು­ಭವಿಸಿದ ಸಂಕಟದ ಕ್ಷಣಗಳನ್ನು ‘ಪ್ರಜಾವಾಣಿ’ಗೆ ವಿವರಿಸಿದರು. ಗುರುವಾರ ಬೆಳಗಿನ ಜಾವ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈ ಕುಟುಂಬ ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದಾಗ ಮುಖದ ಮೇಲೆ ಮಡುಗಟ್ಟಿದ ಭಯ, ಆತಂಕ ಮಾಯ­ವಾಗಿ ಮಂದ ಹಾಸ ಚಿಮ್ಮಿತ್ತು.

ಈ ತಿಂಗಳ ಆರರಂದು ಗಿರೀಶ್‌ ಕುಟುಂಬ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಅವರನ್ನು ಮಳೆ ಅದ್ದೂರಿಯಾಗಿ ಸ್ವಾಗತಿಸಿತು. ವಿಮಾನ ನಿಲ್ದಾಣದ ರಸ್ತೆ ಮೇಲೆ ನೀರಿದ್ದರೂ, ಪರಿ­ಸ್ಥಿತಿ ಇನ್ನೂ ಹದಗೆಟ್ಟಿರಲಿಲ್ಲ. ದಾಲ್‌ ಸರೋವರದ ಬಳಿಯ ಹೋಟೆಲ್‌ ‘ಗ್ರಾಂಡ್‌ ಮಮತಾ’ದಲ್ಲಿ ತಂಗಿದರು. ಮರುದಿನ ಬೆಳಿಗ್ಗೆ ಅವರು ಏಳುವುದರೊಳಗೆ ಹೋಟೆಲ್‌ಗೆ ನೀರು ನುಗ್ಗಿತ್ತು. ನಾಳೆಯೊಳಗೆ ಮಳೆ ನಿಲ್ಲಬಹುದು. ನೀರು ಕಡಿಮೆ ಆಗ­­ಬಹುದು ಎಂಬ ಭಾವನೆ ಅವರಿಗಿತ್ತು. ಆದರೆ, ಅವರ ಲೆಕ್ಕಾ­ಚಾರ ತಲೆಕೆಳಗಾಯಿತು. ನೀರಿನ ಮಟ್ಟ ಏರುತ್ತಾ ಹೋಯಿತು. ಹೆಗಲ ಮಟ್ಟಕ್ಕೆ ನೀರು ಬರುತ್ತಿದ್ದಂತೆ ಎದೆ ಬಡಿತ ಜೋರಾ­ಯಿತು. ಊಟ, ತಿಂಡಿ ಮತ್ತು ಕುಡಿ­ಯುವ ನೀರಿಗೂ ಸಮಸ್ಯೆ­ಯಾ­ಯಿತು. ಹೇಗೊ ಹೋಟೆಲ್‌ ಮಂದಿ ರೊಟ್ಟಿ, ದಾಲ್‌ ಮಾಡಿ ಕೊಟ್ಟರು. ಅಲ್ಲಿಂದ ಪಾರಾಗಿ ಬಂದರೆ ಅವರಿಗೆ ಸಾಕಾಗಿತ್ತು.

ಸ್ಥಳೀಯರನ್ನು ಕಾಡಿಬೇಡಿ ಗಿರೀಶ್‌ ಕುಟುಂಬದ ಸದಸ್ಯರು ಒಂದು ದೋಣಿ ತಂದರು. ಅದರಲ್ಲಿ ಇಬ್ಬಿಬ್ಬರು ಕೂತು ಸುರಕ್ಷಿತ ಸ್ಥಳ ಸೇರಿದರು. ಅಲ್ಲಿಂದ ಮುಂದೆ ಏಳೆಂಟು ಕಿ.ಮೀ ನಡೆದು ಟ್ಯಾಕ್ಸಿ ಹಿಡಿದರು. ಅಷ್ಟು ಹೊತ್ತಿಗೆ ಮುಖ್ಯಮಂತ್ರಿ ಮನೆ ಬಳಿ ಸ್ಥಳೀಯರ ಪ್ರತಿಭಟನೆ ಆರಂಭವಾಗಿತ್ತು. ಇವರ ಟ್ಯಾಕ್ಸಿ ಕಂಡು ಅವರ ಸಿಟ್ಟು  ಇಮ್ಮಡಿ­ಯಾಯಿತು. ಟ್ಯಾಕ್ಸಿಗಳನ್ನು ಅಡ್ಡಗಟ್ಟಿ­ದರು. ‘ನಾವು ಸಾವು– ಬದುಕಿನ ನಡುವೆ ಹೋರಾಡು­ತ್ತಿದ್ದೇವೆ. ನೀವು ಸುಖವಾಗಿ ಕಾರಿನಲ್ಲಿ ಹೋಗುತ್ತಿದ್ದೀರಿ. ನಿಮ್ಮನ್ನು ಹೋಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಕಾರಿನಿಂದ ಎಲ್ಲರನ್ನೂ ಹೊರಗೆಳೆದು ಹಾಕಿದರು. ನಮ್ಮ ಸಾಮಾನು– ಸರಂಜಾಮು­ಗಳನ್ನು ಬಿಸಾಡಿದರು.

ಮುಖ್ಯಮಂತ್ರಿ ವಿರುದ್ಧ ಘೋಷಣೆ­ಗಳನ್ನು ಕೂಗುತ್ತಿದ್ದ ಕಾಶ್ಮೀರಿಗಳು ನಮ್ಮ ಬಟ್ಟೆಬರೆ ಹರಿದು ಹಾಕಿದರು. ಕೆಲವರ ಮೇಲೆ ಹಲ್ಲೆ ಮಾಡಿದರು. ಕಲ್ಲುಗಳನ್ನು ತೂರಿ­ದರು. ಏನೂ ಮಾತನಾಡದೆ ನಾವೆಲ್ಲ ಒಂದೆಡೆ ಅವಿತು ಕುಳಿತೆವು. ಗಲಾಟೆ ಎರಡು, ಮೂರು ಗಂಟೆ ಕಾಲ ಮುಂದುವರೆ­ಯಿತು. ಅಷ್ಟರೊಳಗೆ ಕೇಂದ್ರ ಮೀಸಲು ಪಡೆ ತುಕಡಿ ಧಾವಿಸಿತು. ಸಿಆರ್‌ಪಿಎಫ್‌ ಪ್ರತ್ಯಕ್ಷ­­ವಾದ್ದರಿಂದ ಪ್ರತಿಭಟನೆ ಸ್ವಲ್ಪ ತಣ್ಣಗಾಯಿತು. ಭದ್ರತಾ ಪಡೆ ನೆರವಿನಿಂದ ನಾವು ರಾಜಭವನದ ರಸ್ತೆ ಹಿಡಿದೆವು.

ಅಷ್ಟರೊಳಗೆ ನಮ್ಮ ಬಳಿ ಇದ್ದ ನೀರು ಖಾಲಿ­ಯಾಗಿತ್ತು. ಬ್ರೆಡ್ಡು, ಬಿಸ್ಕತ್ತುಗಳು ಮುಗಿದಿದ್ದವು. ಅನ್ನ, ನೀರಿಗಾಗಿ ಹಾಹಾಕಾರ ಶುರುವಾಯಿತು. ರಾಜಭವನದ ಬಳಿ ಇದ್ದ ಕೆಲವು ಮರಗಳಿಂದ ಸೇಬು ಕಿತ್ತು ತಿಂದೆವು. ರಾಜಭವನದ ಸಮೀಪದಿಂದ ವಾಯು ನೆಲೆ ಹಾಗೂ ವಿಮಾನ ನಿಲ್ದಾಣಕ್ಕೆ ಜನರನ್ನು ಸಾಗಣೆ ಮಾಡಲು ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲಾಗಿತ್ತು. ಅದು ಮತ್ತೊಂದು ದುಃಸ್ವಪ್ನ. ಅಲ್ಲಿ ಜನವೋ ಜನ. ಆ ಜನ­ಜಂಗುಳಿ ನೋಡಿ ನಮ್ಮ ಕಥೆ ಮುಗಿಯಿತು ಎಂದು­ಕೊಂಡೆವು. ತಳ್ಳಾಟ, ನೂಕಾಟ ಮತ್ತು ಕಿತ್ತಾಟ ನಮ್ಮ ಆತ್ಮಸ್ಥೈರ್ಯ ಕುಗ್ಗಿಸಿತು.

ಒಂದು ರಾತ್ರಿ ಮತ್ತು ಹಗಲು ಊಟ, ನೀರಿಲ್ಲದೆ ಕಳೆದೆವು. ಅತ್ಯಂತ ಕಷ್ಟದ ಗಳಿಗೆ­ಯಲ್ಲಿ ಯೋಧರು ಸಹಾಯ ಹಸ್ತ ಚಾಚಿದರು. ಸೇನೆಯಲ್ಲಿ­ರುವ ಕನ್ನಡಿಗರು ನೆರವಿಗೆ ಬಂದರು. ಅವರಲ್ಲಿ ಧಾರವಾಡ ಮೂಲದ ಕಮಾಂಡರ್‌ ಕೂಡಾ ಇದ್ದರು. ಈ ಯೋಧರು ಮಾಡಿದ ಸಹಾಯವನ್ನು ಮರೆಯು­ವಂತಿಲ್ಲ ಎಂದು ಹೇಳು­ವಾಗ ಸುನಿತಾ ಅವರ ಕಣ್ಣಾಲಿಗಳು ತುಂಬಿದ್ದವು. ಕಾಶ್ಮೀರದ ನಮ್ಮ ಅನುಭವ ಒಂದು ಕೆಟ್ಟ ಕನಸು. ಇನ್ನೆಂದೂ ಅಲ್ಲಿಗೆ ಹೋಗಬಾ­ರದೆಂಬ ಭಾವನೆ ಬಂದಿದೆ ಎಂದರು ಗಿರೀಶ್‌.

ಗಿರೀಶ್‌ ಮತ್ತು ಸುನಿತಾ ಅವರಂತೆ ಕೆಟ್ಟ ಕನಸು ಕಂಡಿರುವ 31 ಮಂದಿ ಇದುವರೆಗೆ ದೆಹಲಿ ಮೂಲಕ ಬೆಂಗಳೂರು ದಾರಿ ಹಿಡಿದಿದ್ದಾರೆ. ಅನೇಕರು ಕಾಶ್ಮೀರ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ನೀರಿನ ಮಧ್ಯೆಯೂ ಕೆಲವು ಕನ್ನಡಿಗರು ಸಿಕ್ಕಿರ­ಬಹುದು ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.